೧೨ನೇ ಶತಮಾನದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಚಳವಳಿಯ ಫಲವಾಗಿ ಹುಟ್ಟಿದ ಬರಹಗಳ ಸಮುಚ್ಛಯವೇ ವಚನಗಳು. ವಚನ ಎಂದರೆ ಮಾತು ಎಂದರ್ಥ. ಪ್ರಮಾಣ ಮಾಡಿದ ಮಾತುಗಳು. ಪ್ರತಿಜ್ಞೆ ಎಂಬುದು ಇದರ ಧ್ವನ್ಯರ್ಥ. ಲಿಂಗಾಯತ ಧರ್ಮದ ಪ್ರಾಣಾಳಿಕೆಗಳಂತಿರುವ ಈ ವಚನಗಳನ್ನು ಸಾಹಿತ್ಯ ಎಂದು ಗುರುತಿಸುವುದು,ಪರಿಗಣಿಸುವುದು ೨೦ನೇ ಶತಮಾನದಿಂದ ಈಚೆಗೆ. ಎಲ್ಲ ಜಾತಿ ಜನವರ್ಗದವರು ಸೇರಿ ಆರಂಭಿಸಿದ ಚಳವಳಿಯೇ ವಚನ ಚಳವಳಿ.
ದಾಸಿಮಯ್ಯ, ಅಲ್ಲಮ, ಬಸವ, ಅಕ್ಕ, ಸಿದ್ಧರಾಮ, ಚೆನ್ನಬಸವಣ್ಣ ಮುಂತಾದವರು ಈ ಚಳವಳಿಯ ನಾಯಕರು. ಕಲ್ಯಾಣದ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರ ಕಾಯಕಭೂಮಿಗೆ ನಾಡಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ್ದರು ಎಂಬುದು ಇತಿಹಾಸ. ವಚನ ಗುಮ್ಮಟ ಫ.ಗು. ಹಳಕಟ್ಟಿಯವರ ಅವಿರತ ಶ್ರಮದಿಂದ ಶರಣರ ವಚನಗಳು ದೊರಕಿವೆ.
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕಡೆದಡೆ, ದೇವರೆತ್ತ ಹೋದರೋ?
ಲಿಂಗ ಪ್ರತಿಷ್ಠೆಯ ಮಾಡಿದವಂಗೆ ನಾಯಕ-ನರಕ
ಗುಹೇಶ್ವರ
ಕಲ್ಲಿನಿಂದಲೇ ಅಡಿಪಾಯ ಹಾಕಿ, ಗೋಡೆಗಳನ್ನು ಕಟ್ಟಿ ಕಲ್ಲಿನ ಕಂಬ ನಿಲ್ಲಿಸಿ ದೇವರ ಗುಡಿ ಕಟ್ಟಿರುವುದಲ್ಲದೇ ದೇವರ ವಿಗ್ರಹವನ್ನು ಸಹ ಕಲ್ಲಿನಿಂದಲೇ ಕಡೆದು ರೂಪಿಸಿ, ಶೀವನ ಸಂಕೇತವಾದ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅಲ್ಲಿಯೇ ದೇವರಿದ್ದಾನೆ ಎಂದು ತೋರಿಸುವುದನ್ನು ವಿಡಂಬಿಸುವ ವಚನ ಇದಾಗಿದೆ.
ದೇವಾಲಯ ಕಲ್ಪನೆಯನ್ನು ವಿರೋಧಿಸಿದ ವಚನಕಾರರ ನಿಲುವಿಗೆ ಅಲ್ಲಮಪ್ರಭುಗಳ ಈ ವಚನ ಒಳ್ಳೆಯ ಉದಾಹರಣೆಯಾಗಿದೆ. ಜಡವಾದ ಕಲ್ಲಿನಲ್ಲಿ ದೇವರಿದ್ದಾನೆ ಎಂದು ಜನರನ್ನು ದುರ್ಬಲಗೊಳಿಸಲಾಗಿತ್ತು. ಬಹುಪಾಲು ಜನ ದೇವರ ದರ್ಶನಕ್ಕಾಗಿ ದೇವಾಲಯಗಳ ಮುಂದೆ ಸರದಿ ನಿಲ್ಲುತ್ತಿದ್ದಾರು. ಅಲ್ಲಿ ಅವರಿಗೆ ಶೋಷಣೆ ಮಾಡಲಾಗುತ್ತಿತ್ತು. ಇನ್ನು ಕೆಲವು ಜನರಿಗೆ ದೇವಾಲಯದೊಳಗೆ ಪ್ರವೇಶವಿರಲಿಲ್ಲ. ಹೀಗಾಗಿ ಅವರು ನೊಂದು ಕುಳಿತಿದ್ದರು. ಇದನ್ನು ಕಣ್ಣಾರೆ ಕಂಡ ಶರಣರು, ಜನರಿಗೆ ನಿಜ ದೇವರ ದರ್ಶನ ಮಾಡಲೆತ್ನಿಸಿದರು.
ದೇವರ ದರ್ಶನಕ್ಕಾಗಿ ದೇವಾಲಯದ ಮುಂದೆ ಸರದಿ ನಿಲ್ಲುವ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವಾಲಯ, ದೇವರಮೂರ್ತಿಗಳು ಕಲ್ಲಿನಿಂದ ಮಾಡಿದವುಗಳು. ಕಲ್ಲ ಮೇಲೆ ಕಲ್ಲನಿಟ್ಟು ಕಡೆದ ಆ ಮೂರ್ತಿ ದೇವರಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಅಲ್ಲಮಪ್ರಭುಗಳು, ದೇವರನ್ನು ದೇಗುಲದ ಒಳಗುಡಿಯಲ್ಲಿ ನೆಲೆಗೊಳಿಸುತ್ತಿದ್ದಂತೆಯೇ, ವಿಗ್ರಹದ ಬಳಿ ನಿಂತು ಪೂಜಾರಿ ಮಾತ್ರ ಯೋಗ್ಯನಾಗುತ್ತಾನೆ. ಉಳಿದವರು ಒಳಗುಡಿಯಿಂದ ಹೊರ ನಿಲ್ಲಬೇಕಾಗುತ್ತದೆ. ಇಲ್ಲಿಂದಲೇ ಮನಷ್ಯರ ಮೇಲು-ಕೀಳು ಶುರುವಾಗುತ್ತವೆ ಎಂದು ಹೇಳುವ ಮೂಲಕ ನಮ್ಮನ್ನು ಈ ದಿಸೆಯಲ್ಲಿ ಚಿಂತನೆಗೆ ಹಚ್ಚುತ್ತಾರೆ.
ಕೇವಲ ಮೂರೇ ಮೂರು ಸಾಲುಗಳಿಂದ ಕೂಡಿರುವ ಈ ವಚನವು ಆಗಿನ ಕಾಲದಲ್ಲಿ ನಂಬಿಕೊಂಡು ಬಂದಿರುವ ಧರ್ಮ, ದೇವರುಗಳ ಸ್ವರೂಪ ಹೇಗಿತ್ತು ಎಂಬುದನ್ನು ತುಂಬಾ ಪ್ರಾಯೋಗಿಕವಾಗಿ ಹೇಳುವುದರ ಜೊತೆಗೆ ಅವುಗಳನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ಸಹ ಪ್ರದರ್ಶಿಸುತ್ತಾರೆ. ಜನರಿಗೆ ಕಲ್ಲನ್ನೇ ದೇವರೆಂದು ತೋರಿಸಿ ಪೂಜಿಸಲು ಹಚ್ಚಿದ ಪೂಜಾರಿ-ಪುರೋಹಿತರಿಗೆ ನಾಯಕ ನರಕ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ.
ದೇವಾಲಯ ಸಂಸ್ಕೃತಿಯನ್ನು ವಚನಕಾರರು ಎರಡು ಕಾರಣಗಳಿಗಾಗಿ ವಿರೋಧಿಸಿದರು. ಒಂದು-ವಚನಕಾರರು ಇಷ್ಟ ದೈವದ ಪ್ರತಿಪಾದಕರಾಗಿದ್ದರು. ಎರಡು- ದೇವಾಲಯಗಳು ಶೋಷಣೆಯ, ಮೂಢನಂಬಿಕೆಯ ಕೇಂದ್ರ. ದೇವರಿಗೆ ಸಾಕಷ್ಟು ಹಣ ಖರ್ಚು ಮಾಡಿ ವೈಭವದ ದೇವಾಲಯಗಳನ್ನು ಕಟ್ಟುವುದು ಅರ್ಥಹೀನ ಎನ್ನುವುದು ಅಲ್ಲಮರ ಭಾವನೆ. ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎಂಬುದು ಅವರ ದೃಢ ನಿಲುವು. ದೇವರನ್ನು ಕಲ್ಲು, ಮಣ್ಣು, ಮುಳ್ಳುಗಳಲ್ಲಿ ಹುಡುಕಬಾರದು. ಅಲ್ಲೆಲ್ಲ ಆತನ ಇರುವು ಕಾಣಲು ಸಾಧ್ಯವಿಲ್ಲ. ದೇವರು ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾನೆ. ದೇವರು ದೇವಾಲಯವಾಸಿಯಲ್ಲ. ಆತ ಹೃದಯವಾಸಿಯಾಗಿದ್ದಾನೆ ಎಂಬುದನ್ನು ಅವರು ಸಾರಿದ್ದಾರೆ.
ಹಾಗೆಂದ ಮಾತ್ರಕ್ಕೆ ವಚನಕಾರರು ದೇವರು ಇಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅವರಿಗೆ ಅದರ ಅವಶ್ಯಕತೆಯೂ ಇರಲಿಲ್ಲ. ದೇವರನ್ನು ಒಪ್ಪಿಕೊಂಡಿರುವ ವಚನಕಾರರಿಗೆ ಜನರ ಬದುಕು ಹಸನುಗೊಳಿಸುವುದು ಮುಖ್ಯವಾಗಿತ್ತು. ಸಕಲ ವಿಸ್ತಾರದ ರೂಹು ಆಗಿರುವ ದೇವರನ್ನು ಒಂದು ಸ್ಥಳದಲ್ಲಿ ಮೂರ್ತಿ ಮಾಡಿಟ್ಟು ಪೂಜಿಸುವುದು ಎಷ್ಟು ಅರ್ಥಹೀನ. ಇದನ್ನೇ ಸೊನ್ನಲಿಗೆಯ ಸಿದ್ಧರಾಮರು, “ಕುಂಬಾರ ಮಾಡಿದ ಗಡಿಗೆಯಲ್ಲಿ ಕುಂಬಾರನಿಲ್ಲ. ಆದರೆ ಕುಂಬರನಿಲ್ಲದೆ ಆ ಗಡಿಗೆ ಸಿದ್ಧವಾಗಲು ಸಾಧ್ಯವಿಲ್ಲ”. ದೇವರ ಇರವು ಇರುವುದು ಮರದೊಳಗೆ ಅಡಗಿರುವ ಅಗ್ನಿಯಂತೆ, ನೊರೆವಾಲೊಳಗಿನ ತುಪ್ಪದ ಕಂಪಿನಂತೆ…ಎಂದು ದೇವರ ದಾಸಿಮಯ್ಯ ಹೇಳಿದ್ದಾರೆ. ಇಂತಹ ಸತ್ಯ ಶುದ್ಧನಾದ ದೇವರನ್ನು ನಾವು ಪೂಜಿಸಬೇಕು. ಕಾಣಬೇಕು ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ.