ಕಲಬುರಗಿ: ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಇದ್ದರೂ, ನಿಯಮ ಉಲ್ಲಂಘಿಸಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಏಪ್ರಿಲ್ 15 ರಂದು ಹನುಮಾನ್ ದೇವಸ್ಥಾನದ ತೇರು ಎಳೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದು, ಕರ್ತವ್ಯ ಲೋಪ ಆಧರಿಸಿ ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಒಬ್ಬರನ್ನು ಜಿಲ್ಲಾಧಿಕಾರಿ ಶರತ್ ಬಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮದ 15 ಜನರ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಗ್ರಾಮಸ್ಥರಿಗೆ ಅಧಿಕಾರಿಗಳು ರಥೋತ್ಸವ ನಡೆಸದಿರಲು ಸೂಚಿಸಿದ್ದರೂ, 200 ಕ್ಕೂ ಹೆಚ್ಚು ಜನರು ಈ ರಥೋತ್ಸವದಲ್ಲಿ ಭಾಗವಹಿಸಿದ್ದಾರೆ. ರಥೋತ್ಸವ ಕಾರ್ಯಕ್ರಮ ನಡೆಸಿದ್ದಾರೆಂದು ತಿಳಿದುಬಂದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ರಥೋತ್ಸವ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.
ಆಳಂದ ತಾಲೂಕು, ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಕಲಬುರಗಿಯಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಡುವೆ ರಥೋತ್ಸವ ನಡೆದಿದ್ದು, ಇದೀಗ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ವೈರಸ್ ಭೀತಿಯ ಆತಂಕ ಎದುರಾಗಿದೆ.
ಈ ಹಿಂದಷ್ಟೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮಸ್ಥರು ಸಿದ್ಧಲಿಂಗೇಶ್ವರ ದೇವರ ರಥೋತ್ಸವ ನೆರವೇರಿಸಿದ್ದರು.