ಶ್ರೇಷ್ಠತೆ, ಸಂಪತ್ತು, ಜ್ಞಾನ, ಪಾಂಡಿತ್ಯ ಮುಂತಾದವುಗಳು ಕೇವಲ ಕೆಲವರ ಸೊತ್ತು ಮತ್ತು ತೊತ್ತಾಗಿದ್ದ, ಶಸ್ತ್ರ ಮತ್ತು ಶಾಸ್ತ್ರ ಮಾತ್ರದಿಂದಲೇ ಆಳ್ವಿಕೆ ನಡೆಸುತ್ತಿದ್ದ ೧೨ನೇ ಶತಮಾನಕ್ಕಿಂತ ಪೂರ್ವದ ಕಾಲದಲ್ಲಿ ಬಡವರ ಬದುಕು ತೀರಾ ಬಗ್ಗಡಗೊಂಡಿತ್ತು. ದುಡಿಯುವವನು ದುಡಿಯಲೇಬೇಕಾಗಿತ್ತು. ಆಳುವವನು ಆಳುತ್ತಲೇ ಇದ್ದ. ಇಂತಹ ದುರ್ಬರ ಸಂದರ್ಭದಲ್ಲಿ ಹುಟ್ಟಿ ಬಂದ ಬಸವಣ್ಣನವರು ಸಮಾಜದಲ್ಲಿ ಸತ್ಯ, ಶಾಂತಿ, ನ್ಯಾಯ, ನೀತಿ, ಸಮಾನತೆ, ಸ್ವಾತಂತ್ರ್ಯದ ಮಂತ್ರ ಪಠಿಸಿದರು.
ಶ್ರೇಷ್ಠತೆ ಎನ್ನುವುದು ಹುಟ್ಟಿನಿಂದ ಬರುವಂತಹದ್ದಲ್ಲ. ಅದು ಸಾಧನೆಯಿಂದ ಬರಬೇಕು. ಸಂಪತ್ತಿನ ಸದ್ವಿನಿಯೋಗ, ಸದುಪಯೋಗ ಆಗಬೇಕು. ಇಲ್ಲದಿದ್ದಲ್ಲಿ ಅದು ಸತ್ಪಾತ್ರಕ್ಕೆ ಸಲ್ಲುವುದಿಲ್ಲ. ಅದರಂತೆ ಜ್ಞಾನ ಮತ್ತು ಪಾಂಡಿತ್ಯ ಕೂಡ ಯಾರ ಸೊತ್ತು ಅಲ್ಲ. ಅದು ಸಾಹಸಿಗನ ಕೈ ವಶ. ಶಸ್ತ್ರ ಹಿಡಿದು ಹೋರಾಟ ಮಾಡುವುದೇ ಕ್ಷಾತ್ರತೇಜ ಪ್ರದರ್ಶನವಲ್ಲ. ಅದರ ಬದಲಾಗಿ ಶಾಂತಿ, ಸೌಹಾರ್ದತೆ ನೆಲೆಸಲು ಜನಜಾಗೃತಿಯನ್ನುಂಟು ಮಾಡುವುದೇ ನಿಜವಾದ ಶೌರ್ಯ ಪ್ರದರ್ಶನ. ಶಾಸ್ತ್ರ ಹೇಳುವುದಕ್ಕೆ ಬದನೆಕಾಯಿ ತಿನ್ನುವುದಕ್ಕೆ ಎಂದು ತಮ್ಮ ಪೂರ್ವ ಕಾಲದ ಕುತಂತ್ರವನ್ನು, ಷಡ್ಯಂತ್ರವನ್ನು ಬಿಡಿ ಬಿಡಿಸಿ ಹೇಳಿದ ಬಸವಣ್ಣನವರು ದೂರದೃಷ್ಟಿ ಹಾಗೂ ಸೂಕ್ಷ್ಮಮತಿ ಉಳ್ಳವರಾಗಿದ್ದರು.
ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯ
ಅಯ್ಯ ನಮ್ಮಯ್ಯನ ಕೈನೊಂದಿತ್ತು
ತೆಗೆದು ಕೊಡಾ ಬೆಂಡೋಲೆ ಕಿತ್ತಿ
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದೊಡೆ
ಕೂಡಲಸಂಗಮದೇವನಲ್ಲದೆ ಆರೂ ಇಲ್ಲ
ಒಮ್ಮೆ ರಾತ್ರಿಯೊತ್ತು ತನ್ನ ಪ್ರಿಯ ಸತಿ ನೀಲಾಂಬಿಕೆಯ ಕಿವಿಯಲ್ಲಿದ್ದ ಚಿನ್ನದ ಆಭರಣವನ್ನು ಕದ್ದೊಯ್ಯಲು ಕಳ್ಳರು ಬಸವಣ್ಣನವರ ಮನೆಗೆ ನುಗ್ಗಿ ಬರುತ್ತಾರೆ. ಹಾಗೆ ಬಂದ ಅವರು ನೀಲಾಂಬಿಕೆಯ ಕಿವಿಯಲ್ಲಿರುವ ಆಭರಣಕ್ಕೆ ಕೈ ಹಾಕಿದಾಗ, ಸಹಜವಾಗಿಯೇ ಕಳ್ಳರು! ಕಳ್ಳರು!! ಎಂದು ನೀಲಾಂಬಿಕೆ ಗಾಬರಿಗೊಂಡು ಚೀರುತ್ತಾಳೆ. ಪಕ್ಕದಲ್ಲಿದ್ದ ಬಸವಣ್ಣನವರಿಗೆ ಎಚ್ಚರವಾಗಿ ನೋಡುತ್ತಾರೆ. ಆ ಕಳ್ಳರು ಕೂಡ ಶರಣರ ವೇಷದಲ್ಲಿರುವುದನ್ನು ಕಂಡು, ಕಳ್ಳತನಕ್ಕೆ ಬಂದ ಅವರನ್ನು ಹಿಡಿಯದೆ ಅವಶ್ಯಕತೆಗಿಂತ ಹೆಚ್ಚಾಗಿದ್ದ ದ್ರವ್ಯ ಇಟ್ಟುಕೊಂಡ ತಾನೇ ಮೊದಲ ಕಳ್ಳ ಎಂದು ಗ್ರಹಿಸಿ ಕೂಡಲೇ, ತನ್ನ “ಪೃಥ್ವಿಗಗ್ಗಳ ಚೆಲುವೆಯಾಗಿದ್ದ ನೀಲಾಂಬಿಕೆ”ಯನ್ನು ಉದ್ದೇಶಿಸಿ “ತೆಗೆದು ಕೊಡು ಆ ಬೆಂಡೋಲೆಗಳನ್ನು ಕಿತ್ತಿ” ಎಂದು ಹೇಳುತ್ತಾನೆ. ಒಂದುವೇಳೆ ನೀನು ಕೊಡದಿದ್ದರೆ ಅವರೇ ಬಲವಂತವಾಗಿ ಕಿತ್ತುಕೊಂಡರೆ ಅವರ ಕೈಗೆ ನೋವಾಗಬಲ್ಲುದು. ಮನಸ್ಸಿಗೆ ಬೇಜಾರು ಎನಿಸುತ್ತದೆ ಎಂದು ಹೇಳಿ ತಾನೇ ಅವಳ ಕಿವಿಯೋಲೆಗಳನ್ನು ತೆಗೆದುಕೊಡಲು ಮುಂದಾಗುತ್ತಾರೆ.
ಮೇಲಿನ ಈ ವಚನವು ಬಸವಣ್ಣನವರು ಕಳ್ಳರಿಗೆ ಸಾಕ್ಷಾತ್ ಕೂಡಲಸಂಗಮದೇವ ಎಂದು ಕರೆದು ಅಪರೋಕ್ಷವಾಗಿ ಕಳ್ಳತನಕ್ಕೆ ಪ್ರೋತ್ಸಾಹಿಸುತ್ತಿದ್ದರು ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಮೇಲಾಗಿ ಈ ವಚನದ ನಾಲ್ಕನೇ ಸಾಲಿನಲ್ಲಿ ಬರುವ “ಚಾಂಡಾಲಗಿತ್ತಿ” ಎಂಬ ಪದ ಪ್ರಯೋಗವು ಅವರ ಬಾಯಿಯಿಂದ ಬಂದಿರುವುದು ಕೂಡ ಅವರ ಇಡೀ ವ್ಯಕ್ತಿತ್ವವನ್ನೇ ಅನುಮಾನಿಸುವಂತೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಆದರೆ ಬಸವಣ್ಣನವರ ಈ ವಚನವನ್ನು ಆಳವಾಗಿ ಪುನಾರಾಲೋಚಿಸಿದಲ್ಲಿ ಅದರ ಅರ್ಥ ಬೇರೆಯಾಗಿಯೇ ಕಂಡು ಬರುತ್ತದೆ.
ಮನೆಗೆ ಬಂದ ಕಳ್ಳರನ್ನು ಕಳ್ಳರೆಂದು ಕರೆಯದೆ ಸಾಕ್ಷಾತ್ ಕೂಡಲಸಂಗಮದೇವ ಎಂದು ಕರೆದ ಬಸವಣ್ಣನವರು ಸಾರ್ವತ್ರಿಕವಾಗಿ “ಕಳಬೇಡ, ಕೊಲಬೇಡ” ಎಂದು ಹೇಗೆ ಹೇಳುತ್ತಾರೆ ಇದು ಯಾವ ನೈತಿಕತೆ? ಕಳ್ಳತನಕ್ಕೆ ಬಂದವರನ್ನು ಬೈಯ್ದು, ಒದ್ದು ಬುದ್ಧಿ ಕಲಿಸಬೇಕಲ್ಲದೆ ಅವರನ್ನೇ ಓಲೈಸುವುದು ಎಷ್ಟು ಉಚಿತ? ಎಂಬಿತ್ಯಾದಿಯಾಗಿ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಆದರೆ ಸಮಾಜ ವಿಜ್ಞಾನಿಯೂ ಮತ್ತು ಅದೇವೇಳೆಗೆ ಆರ್ಥಿಕತಜ್ಞನಾಗಿದ್ದ ಬಸವಣ್ಣನವರು, ಅವಶ್ಯಕತೆಗಿಂತ ಹೆಚ್ಚಿಗೆ ಇಟ್ಟುಕೊಂಡವನೇ ಹೆಚ್ಚಿನ ಕಳ್ಳ. ಸಂಪತ್ತು ಒಂದೇ ಕಡೆ ಕೂಡಿ ಬಿದ್ದುದರಿಂದಲೇ ಸಾರ್ವಜನಿಕವಾಗಿ ಬಡತನ ಹುಟ್ಟಿಕೊಳ್ಳುತ್ತದೆ ಎಂಬುದನ್ನು ತನ್ಮೂಲಕ ತೋರಿಸಿಕೊಡುತ್ತಾರೆ.
ಹನ್ನೆರಡನೆಯ ಶತಮಾನದಂತಹ ಸಾಮಾಜಿಕ, ಕೌಟುಂಬಿಕ ದಾರಿದ್ರ್ಯತನಕ್ಕೆ ಅವರವರ ಹಣೆಬರಹವೇ ಮುಖ್ಯ ಕಾರಣ ಎಂದು ಬಲವಾಗಿ ನಂಬಿದಂತಹ ಆ ಕೆಟ್ಟ ಕಾಲದಲ್ಲಿ ಸಂಪತ್ತು ಸಮಾನ ಹಂಚಿಕೆಯಾಗಬೇಕು. ಅದಕ್ಕೆ ಮುಖ್ಯಮಂತ್ರಿ, ಮಂತ್ರಿಯೂ ಹೊರತಾಗಿಲ್ಲ ಎಂಬುದನ್ನು ತೋರಿಕೊಡುತ್ತಾರೆ. ಅರ್ಥಮಂತ್ರಿಯಾಗಿದ್ದ ಬಸವಣ್ಣವರಿಗೆ ಆಗ ಮನೆಗೆ ಬಂದಿದ್ದ ಕಳ್ಳರಿಗೆ ಶಿಕ್ಷೆ ಕೊಡುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ ಅವರಿಗೆ ಮುಖ್ಯವಾಗಿ ಕಳ್ಳರ ಮನಸ್ಸನ್ನು ಬದಲಿಸುವುದಾಗಿತ್ತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.