ಸುರಪುರ: ಇದೇ ತಿಂಗಳ ಇಪ್ಪತ್ತನೆ ತಾರೀಖಿನಂದು ನಗರದಲ್ಲಿ ನಡೆಯಲಿರುವ ಡಾ:ಬಾಬಾ ಸಾಹೇಬ ಅಂಬೇಡ್ಕರರ ೧೨೮ನೇ ಜಯಂತಿ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಡಾ:ಬಿ.ಆರ್.ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸಮನಿ ಮಾತನಾಡಿದರು.
ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹಾಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಜಯಂತಿ ಕಾರ್ಯಕ್ರಮದ ಸಿಧ್ಧತೆ ಈಗಾಗಲೆ ಪೂರ್ಣಗೊಂಡಿದ್ದು ತಾಲ್ಲೂಕಿನ ಪ್ರತಿ ಗ್ರಾಮಗಳಿಂದಲೂ ಬುಧ್ದ ಬಸವ ಅಂಬೇಡ್ಕರರ ಅನುಯಾಯಿಗಳು ಭಾಗವಹಿಸಲಿದ್ದಾರೆ, ಅಲ್ಲದೆ ಕಾರ್ಯಕ್ರಮದಲ್ಲಿ ವರಜ್ಯೋತಿ ಭಂತೇಜಿ ಬುಧ್ದ ವಿಹಾರ ಅಣದೂರು ಹಾಗು ಮಹಾರಾಷ್ಟ್ರದ ಉಸ್ತುರಿ ಮಠದ ಕೊರಣೇಶ್ವರಿ ಸ್ವಾಮೀಜಿ ಅನುಭಾವ ನೀಡಲಿದ್ದಾರೆ ಮತ್ತು ಉಪನ್ಯಾಸಕರಾಗಿ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಕೆ.ನೀಲಾ ಅವರು ಭಾಗವಹಿಸಲಿದ್ದು ಇವರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಯಂತ್ಯೋತ್ಸವದ ವೇದಿಕೆ ಸಮಿತಿ ಅಧ್ಯಕ್ಷ ಆದಪ್ಪ ಹೊಸಮನಿ ಮಾತನಾಡಿ,ಮದ್ಹ್ಯಾನ ಎರಡು ಗಂಟೆಗೆ ಬುಧ್ದ ವಿಹಾರದಿಂದ ಬುಧ್ದ ಬಸವ ಅಂಬೇಡ್ಕರರ ಮೆರವಣಿಗೆ ನಡೆಯಲಿದ್ದು,ಸಂಜೆ ಬಸ್ ನಿಲ್ದಾಣದ ಬಳಿಯ ಅಂಬೇಡ್ಕರ ವೃತ್ತದಲ್ಲಿ ನಡೆಯುವ ಸಮಾವೇಶದಲ್ಲಿ ಬೆಂಗಳೂರಿನ ಭೂಮಿತಾಯಿ ಬಳಗ ಕಲಾ ಮಂಡಳಿಯ ನಿರ್ಮಲಾ ಮತ್ತು ಸಂಗಡಿಗರಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ ಎಂದರು.
ಹಣಕಾಸು ಸಮಿತಿ ಅಧ್ಯಕ್ಷ ರಾಹುಲ್ ಹುಲಿಮನಿ ಮಾತನಾಡಿ,ಬುಧ್ದ ಬಸವ ಅಂಬೇಡ್ಕರರ ಸ್ಮರಣೆಯ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ ಸುರೇಶ ಅಂಕಲಗಿ ಉದ್ಘಾಟಿಸಲಿದ್ದಾರೆ ಹಾಗು ಅನೇಕ ಜನ ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಲಿದ್ದು ಬಾಬಾ ಸಾಹೇಬರ ಅಭಿಮಾನಿ ನೂರಾರು ಯುವಕರು ಮತ್ತು ಮಹಿಳೆಯರು ವಿಶೇಷವಾದ ಸಮವಸ್ತ್ರಗಳ ಧರಿಸಿ ಕಾರ್ಯಮದ ಮೆರಗು ಹೆಚ್ಚಿಸಲಿದ್ದಾರೆ.ಆದ್ದರಿಂದ ಅಭೂತಪೂರ್ವವಾದ ಕಾರ್ಯಕ್ರಮದಲ್ಲಿ ಬುಧ್ದ ಬಸವ ಮತ್ತು ಅಂಬೇಡ್ಕರರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ವಿವಿದ ಸಮಿತಿಗಳ ಪದಾಧಿಕಾರಿಗಳಾದ ನಾಗಣ್ಣ ಕಲ್ಲದೇವನಹಳ್ಳಿ,ಭೀಮರಾಯ ಸಿಂಧಗೇರಿ ಮಾತನಾಡಿದರು ಹಾಗು ರಮೇಶ ಅರಕೇರಿ,ಮಾಳಪ್ಪ ಕಿರದಹಳ್ಳಿ,ಧರ್ಮರಾಜ ಬಡಿಗೇರ,ರಾಜು ಕಟ್ಟಿಮನಿ,ಚಂದಪ್ಪ ಪಂಚಮ್,ಶೇಖರ ಜೀವಣಗಿ,ಶಂಕರ ಬೊಮ್ಮನಹಳ್ಳಿ,ಮಲ್ಲಿಕಾರ್ಜುನ ಜಾಲಿಬೆಂಚಿ,ಮಲ್ಲಪ್ಪ ನಾಯ್ಕೋಡಿ ಇದ್ದರು.