ಕಲಬುರಗಿ: ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತಮ್ಮ ಜೀವದ ಮತ್ತು ಕುಟುಂಬದ ಹಂಗನ್ನು ತೊರೆದು ಕಣ್ಣಿಗೆ ನಿದ್ದೆಯಿರದೆ ಹಗಲಿರಳು ಕರ್ತವ್ಯ ನಿರ್ವಹಿಸುತ್ತ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನಜಾಗೃತಿ ಮೂಡಿಸುತ್ತಿರುವ ಸಿಬ್ಬಂದಿಗಳಿಗೆ ಸರಕಾರ ಕಲಬುರಗಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಮತ್ತು ಹೋಮ್ ಗಾರ್ಡ್ ಗಳಿಗೆ ಚೌಕಿ ಅಥವಾ ಕೊಡೆ ವ್ಯವಸ್ಥೆ ಮಾಡಬೇಕೆಂದು ಭಾರತ ಮುಕ್ತಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪ್ರತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಮತ್ತು ಹೋಮ್ ಗಾರ್ಡ್ ಸಿಬ್ಬಂದಿಗಳು ಬಿಸಿಲಿನ ತಾಪಕ್ಕೆ ತಾಳದೆ ಗಿಡ – ಮರಗಳ ಆಸರೆ ಪಡೆದು ಯಾವುದಾದರು ವಾಹನಗಳು ಬಂದರೆ ಎದ್ದು ಬಂದು ವಾಹನ ಪರಿಸೀಲಿಸಿ ಮತ್ತೆ ಗಿಡ – ಮರಗಳ ಮೊರೆ ಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಾಜದ ರಕ್ಷಣೆಗಾಗಿ ದುಡಿಯುವ ಸಿಬ್ಬಂದಿಗೆ ಆರೋಗ್ಯದ ಹಿತದೃಷ್ಟಿಯಿಂದ ಪ್ರಮುಖ ಸ್ಥಳಗಳಲ್ಲಿ ಅವರಿಗೆ ಪೊಲೀಸ್ ಚೌಕಿ ಅಥವಾ ಕೊಡೆಗಳು ( ಛತ್ರಿ ) ನೀಡಬೇಕೆಂದು ಪೊಲೀಸ್ ಆಯುಕ್ತರಿಗೆ ಸಂಘಟನೆ ಆಗ್ರಹಿಸಿದೆ.