ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ತಡೆಯುವ ಹಿನ್ನೆಲೆಯಲ್ಲಿ ಲಾಕ್‍ಡಾನ್ ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯತನ, ಬೇಜವ್ದಾರಿತನ ಹಾಗೂ ಮೇಲಾಧಿಕಾರಿಗಳು ನೀಡಲಾದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಕರ್ತವ್ಯ ಲೋಪ ವೆಸಗಿದ ಹಿನ್ನೆಲೆಯಲ್ಲಿ ಸಾವಳಗಿ (ಬಿ) ಗ್ರಾಮಲೆಕ್ಕಾಧಿಕಾರಿ ಜಗದೀಶರೆಡ್ಡಿ ಇವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಲಾಕ್‍ಡಾನ್ ಹಾಗೂ 144 ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು, ಸಭೆ, ಸಮಾರಂಭ, ಜಾತ್ರೆ, ಉರುಸ್‍ಗಳನ್ನು ನಿಷೇಧಿಸಲಾಗಿತ್ತು. ಯಾವುದೇ ಜಾತ್ರೆಗಳನ್ನು ಜರುಗದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿತ್ತು. ಆದರೆ ಕಲಬುರಗಿ ತಾಲೂಕಿನ ಪಟ್ಟಣ ಹೋಬಳಗಿಯ ಸಾವಳಗಿ(ಬಿ) ಗ್ರಾಮದಲ್ಲಿ 2020ರ ಏಪ್ರಿಲ್ 22ರ ಮಧ್ಯರಾತ್ರಿ ಅವಧಿಯಲ್ಲಿ ಶ್ರೀ ಶಿವಲಿಂಗೇಶ್ವರ ದೇವರ ಜಾತ್ರಾ ನಿಮಿತ್ತ ರಥೋತ್ಸವ ಜರುಗಿರುತ್ತದೆ. ಈ ಘಟನೆ ನಡೆದು 15 ದಿನಗಳಾದರೂ ಸಹ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೇ ಕರ್ತವ್ಯ ಲೋಪ ವೆಸಗಿರುತ್ತಾರೆ.
ಕರ್ತವ್ಯ ಲೋಪÀ ವೆಸಗಿರುವ ಹಿನ್ನೆಲೆಯಲ್ಲಿ ಸದರಿ ನೌಕರರ ವಿರುದ್ಧ ವಿಚಾರಣೆ ಬಾಕಿ ಇರಿಸಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಗಳು 1957 ರ ನಿಯಮ (10)(1)(ಡಿ)ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಕರ್ನಾಟಕ ಸೇವಾ ನಿಯಮಗಳು 1958ರ ನಿಯಮ 98ರ ಅನುಸಾರ ಸದರಿ ನೌಕರರು ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ. ಸದರಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿಗಳ ಅದೇಶದಲ್ಲಿ ತಿಳಿಸಲಾಗಿದೆ.