ಒಲಿದಂತೆ ಹಾಡಿದ ವಚನ ಸಾಹಿತ್ಯ

0
116

೧೨ನೇ ಶತಮಾನದ ಶಿವಶರಣರ ವಚನ ಸಾಹಿತ್ಯ ಬರೆಯಬೇಕೆಂದುಕೊಂಡು ಒಂದೆಡೆ ಕುಳಿತು ಬರೆದ ಸಾಹಿತ್ಯವಲ್ಲ. ಹತ್ತಿಕ್ಕಲಾಗದ ಭಾವನೆಗಳಿಗೆ ಅನುಭವದ ಸ್ಪರ್ಶ ನೀಡಿ ರಚಿಸಿದ ಅನುಭಾವ ಸಾಹಿತ್ಯ ಅದು. “ತಾಳಮಾನ ಸರಿಸವನರಿಯೆ! ಓಜ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎಂದು ರೂಪುಗೊಂಡ ಸಹಜ ಸಾಹಿತ್ಯ ಅದು. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಇಲ್ಲವೇ ಪ್ರಶಸ್ತಿ ಪುರಸ್ಕಾರಕ್ಕಾಗಿ ಅವರು ಖಂಡಿತ ಬರೆಯಲಿಲ್ಲ. ಆದರೆ ಆಶ್ಚರ್ಯವೆಂದರೆ ಇಂದಿಗೂ ಅವರು ರಚಿಸಿದ ವಚನ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಪಂಡಿತರೆನಿಸಿಕೊಂಡವರು ಸಹ ತಿಣುಕಾಡುತ್ತಿದ್ದಾರೆ.

ಜನಪದರು ಬಳಸುವ ಆಡುಭಾಷೆಯನ್ನೇ ತಮ್ಮ ಹೃದಯದ ಭಾಷೆಯನ್ನಾಗಿಸಿಕೊಂಡ ವಚನಕಾರರು ಜನವಾಣಿಯನ್ನೇ ತಮ್ಮ ಬರಹದ ಭಾಷೆಯನ್ನಾಗಿಸಿಕೊಂಡು ಬರೆದರು. ಅವರು ರಚಿಸಿದ ವಚನಗಳು ಮಾತು ಕೊಟ್ಟಂತಿವೆ. ಪ್ರಮಾಣ ಮಾಡಿದಂತಿವೆ. ಗದ್ಯ ಮತ್ತು ಪದ್ಯ ಮಿಶ್ರಿತ ಈ ಸಾಹಿತ್ಯ ಏಕಕಾಲದಲ್ಲಿಯೇ ಓದಿನ ಗ್ರಹಿಕೆಗೂ ಮತ್ತು ಹಾಡಿನ ತಾಳಕ್ಕೂ ನಿಲುಕುವಂತಿದೆ. ಅವರ ನಡೆ-ನುಡಿ ಒಂದಾಗಿದ್ದರಿಂದಲೇ ಅವರು ರಚಿಸಿದ ವಚನ ಸಾಹಿತ್ಯಕ್ಕೆ ಬೆಲೆ ಇರುವುದು.

Contact Your\'s Advertisement; 9902492681

ಭಾವವನ್ನು ಭಾಷೆಗೆ ಇಳಿಸುವುದು ಕಷ್ಟದ ಕೆಲಸ. ಅದರಲ್ಲೂ ಒಲಿದಂತೆ ಹಾಡಿದ ವಚನಗಳನ್ನು ಇನ್ನೊಂದು ಭಾಷೆಗೆ ತರ್ಜುಮೆ ಮಾಡುವುದು ಇನ್ನೂ ಕಷ್ಟದ ಕೆಲಸ. ಕನ್ನಡದ ಈ ವಚನಗಳನ್ನು ಮತ್ತೊಂದು ಭಾಷೆಗೆ ಅನುವಾದ ಮಾಡುವಾಗ ಸಾಕಷ್ಟು ಸವಾಲುಗಳುನ್ನು ಎದುರಿಸಬೇಕಾಗುತ್ತದೆ. ಭಾಷಾಂತರದ ವೇಳೆ ಅರ್ಥಕ್ಕೆ ಅನರ್ಥಗಳಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ವಚನಗಳನ್ನು ಮೂಲಭಾಷೆಯ ಆಶಯಕ್ಕೆ ಧಕ್ಕೆ ತರದ ರೀತಿಯಲ್ಲಿ ಅನುವಾದ ಮಾಡುವುದೆಂದರೆ ಸಾಹಸದ ಕೆಲಸವೇ ಸೈ!

ತೊರೆಯಮೀವ ಸ್ವಾಮಿಗಳಿರಾ? ತೊರೆಯಮೀವ ಅಣ್ಣಗಳಿರಾ?
ತೊರೆಯಿಂಭೋ ಪರಧನವ, ತೊರೆಯಿಂಭೋ ಪರಸತಿಯರ ಸಂಗವ
ಇವ ತೊರೆಯದೆ ಬರಿ ತೊರೆ ಮಿಂದರೆ ಹೋಹುದೇ?
ಕೂಡಲಸಂಗಮದೇವ.

ಬಸವಣ್ಣನವರ ಈ ವಚನ ಮೇಲ್ನೋಟಕ್ಕೆ ಸುಲಭವಾಗಿ ಅರ್ಥೈಸಬಹುದಾದ ವಚನ. ಆದರೆ ಈ ವಚನವನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಬೇಕಾದಾಗ, ಸಾಕಷ್ಟು ಎಡರು ತೊಡರುಗನ್ನು ಎದುರಿಸಬೇಕಾಗುತ್ತದೆ. “ತೊರೆ” ಎನ್ನುವ ಶಬ್ದ ಇಲ್ಲಿ ಎರಡು ರೀತಿಯಲ್ಲಿ ಉಪಯೋಗಿಸಿರುವುದನ್ನು ಕಾಣಬಹುದಾಗಿದೆ. ವಚನದ ಮೊದಲ ಸಾಲಿನಲ್ಲಿ ಬಳಸಿರುವ ತೊರೆ ಎಂಬ ಪದವು ನದಿ, ಕೆರೆ, ಹಳ್ಳ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ಆದರೆ ಎರಡನೆ ಸಾಲಿನಲ್ಲಿ ಬಳಸಿರುವ ತೊರೆ ಶಬ್ದ “ಬಿಟ್ಟು ಬಿಡು” ಎಂಬರ್ಥದಲ್ಲಿ ಬಳಸಲಾಗಿದೆ.

ನದಿಯ ನೀರು ಪವಿತ್ರ. ಆ ನೀರಿನಲ್ಲಿ ಮುಳುಗೆದ್ದರೆ ನಮಗೆ ಅಂಟಿಕೊಂಡು ಬಂದಿರುವ ಪಾಪ ಕರ್ಮಗಳು ತನ್ನಿಂದ ತಾನೆ ಹೊರಟು ಹೋಗುತ್ತವೆ. ಹೀಗೆ ಕಣ್ಣು, ಕಿವಿ, ಮೂಗು ಮುಚ್ಚಿಕೊಂಡು ನದಿ, ಹಳ್ಳ, ಕರೆ, ಬಾವಿಗಳಲ್ಲಿ ಮುಳುಗೇಳುವ ಜನರನ್ನು ಉದ್ದೇಶವಾಗಿಟ್ಟುಕೊಂಡು ಬರೆದಿರುವ ವಚನ ಇದಾಗಿದೆ. ಪಾಪ ಕರ್ಮಗಳು ಮೈಗೆ ಅಂಟಿಕೊಂಡಿರುವುದಿಲ್ಲ. ಅವು ಮನಸ್ಸಿಗೆ ಅಂಟಿದ ಕಪ್ಪು ಚುಕ್ಕೆಗಳು. ಈ ಪಾಪ ಕರ್ಮಗಳನ್ನು ತೊಳೆದುಕೊಳ್ಳುವುದಕ್ಕಾಗಿ ನೀರಿಗಳಿಯುವುದು ನಿರರ್ಥಕ ಪ್ರಕ್ರಿಯೆ. ಅಜ್ಞಾನದ ಸಂಕೇತ ಎಂದು ಬಸವಣ್ಣನವರು ಹೇಳುತ್ತಾರೆ.

ನಾವು ಮಾಡುವ ಪ್ರಯತ್ನ ಫಲ ಕಾಣಬೇಕಾದರೆ ಮೊದಲು ನಾವು ಪರಧನ ಮತ್ತು ಪರಸ್ತ್ರೀಯರ ಸಂಗ ತೊರೆಯಬೇಕು (ಬಿಟ್ಟು ಬಿಡು). ದುರಾಚಾರ, ದುರ್ವ್ಯಸನಗಳಿಂದ ದೂರವಿದ್ದು, ಹೆಜ್ಜೇನು ಸವಿದಂತಿರುವ ಸಜ್ಜನರ ಸಂಗ ಮಾಡುವುದೇ ಲೇಸು. ಅಂದಾಗ ಮಾತ್ರ ಸಾರ್ಥಕ ಬದುಕಿನ ಭಾವ ಬರಲು ಸಾಧ್ಯ ಎಂಬುದು ಬಸವಣ್ಣನವರ ಈ ವಚನದ ಇಂಗಿತ. ಒಂದುವೇಳೆ ಈ ವಚನವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಬೇಕಾದಾಗ ಎರಡು ಕಡೆ ಬೇರೆ ಬೇರೆ ಅರ್ಥದ ರೀತಿಯಲ್ಲಿ ಬಳಕೆಯಾಗಿರುವ ತೊರೆ ಎಂಬ ಪದಕ್ಕೆ ಎರಡೆರಡು ರೀತಿಯ ಆಂಗ್ಲ ಶಬ್ದವನ್ನು ಬಳಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯವಾಗಿದೆ.

ತೊರೆ ಎಂಬ ಶಬ್ದ ಬಳಕೆಯ ಸಂದರ್ಭ ಮತ್ತು ಕಾಲವನ್ನು ನಾವು ಅರ್ಥಮಾಡಿಕೊಂಡಿರಲೇಬೇಕಾಗುತ್ತದೆ. ಅಂದಾಗ ಮಾತ್ರ ಶರಣರ ವಚನಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಭಾಷಾಂತರ ಮಾಡಬಹುದು. ಈ ಸೂಕ್ಷ್ಮತೆ ಗೊತ್ತಿಲ್ಲದಿದ್ದರೆ ಸಾಕಷ್ಟು ಆವಾಂತರಗಳು ಸೃಷ್ಟಿಯಾಗುತ್ತವೆ. ಈ ಹಿಂದೆ ಬಸವಣ್ಣನವರ ಕೂಡಲಸಂಗಮದೇವ ಎಂಬುದನ್ನು ಆಂಗ್ಲ ಭಾಷಾ ಪಂಡಿತರೊಬ್ಬರು “ದಿ ಲಾರ್ಡ್ ಆಫ್ ಮೀಟಿಂಗ್ ರಿವರ್” ಎಂದು ಅನುವಾದ ಮಾಡಿ ಛೀ ಮಾರಿ ಹಾಕಿಸಿಕೊಂಡದ್ದೂ ಉಂಟು.

ಅಷ್ಟಕ್ಕೂ ಕನ್ನಡದ ವಚನಗಳನ್ನು ಅನ್ಯಭಾಷೆಗೆ ತರ್ಜುಮೆ ಮಾಡಬಹುದು. ಆದರೆ ಕನ್ನಡ ಭಾಷೆಯಲ್ಲಿನ ಭಾವ ಅನುವಾದಗೊಂಡ ಭಾಷೆಗೆ ದಕ್ಕುವುದು ಸಾಧ್ಯವಿಲ್ಲ ಎಂದು ಹೇಳಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here