ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ ಇವರ ನೇತೃತ್ವದಲ್ಲಿ ಕಲಬುರಗಿ ವಲಯ ನಂ.೧ರ ಅಬಕಾರಿ ನಿರೀಕ್ಷಕ ಹಾಗೂ ಸಿಬ್ಬಂದಿಗಳೊಂದಿಗೆ ಮಂಗಳವಾರ ಕಲಬುರಗಿಯ ಭರತನಗರ ತಾಂಡಾ ಹಾಗೂ ಲುಖಮಾನ ಕಾಲೇಜು ಪ್ರದೇಶದ ವ್ಯಾಪ್ತಿಯಲ್ಲಿ ಅಬಕಾರಿ ದಾಳಿ ನಡೆಸಿ ೧೦ ಲೀಟರ ಕಳ್ಳಭಟ್ಟಿ ಸರಾಯಿ ಮತ್ತು ೬೦ ಲೀಟರ ಬೆಲ್ಲದಕೊಳೆ ಜಪ್ತಿಪಡಿಸಿದ್ದಾರೆ.
ಈ ಕುರಿತು ಅಬಕಾರಿ ನಿರೀಕ್ಷಕರಾದ ವಿಠ್ಠಲರಾವ ಎಂ. ವಾಲಿ ಹಾಗೂ ಬಾಲಕೃಷ್ಣ ಮುದಕಣ್ಣ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ದಾಳಿ ಸಂದರ್ಭದಲ್ಲಿ ಅಬಕಾರಿ ಉಪ ನಿರೀಕ್ಷಕ ಸಂತೋಷಕುಮಾರ, ಅಬಕಾರಿ ಹಿರಿಯ ರಕ್ಷಕ ಬಸವರಾಜ, ಅಬಕಾರಿ ರಕ್ಷಕರಾದ ಮೋಹನ, ಯಮುನಾಬಾಯಿ ಹಾಗೂ ಸಿಬ್ಬಂದಿಗಳಾದ ವೆಂಕಟೇಶ, ಜಗನ್ನಾಥ ಬಿರಾದಾರ ಉಪಸ್ಥಿತರಿದ್ದರು.
ಅದೇ ರೀತಿ ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕರಾದ ವನಿತಾ ಎಸ್.ಸೀತಾಳೆ ಅವರು ಜೇವರ್ಗಿ ತಾಲೂಕಿನ ಬಳಬಟ್ಟಿ ತಾಂಡದಲ್ಲಿ ದಾಳಿ ನಡೆಸಿ ೧೮ ಲೀಟರ ಕಳ್ಳಭಟ್ಟಿ ಸರಾಯಿ ಜಪ್ತಿಪಡಿಸಿದ್ದು, ಪರಾರಿಯಾದ ಬಳಭಟ್ಟಿ ತಾಂಡಾದ ಅಮೃತ ಧರ್ಮು ಚವ್ಹಾಣ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಜೇವರ್ಗಿ ವಲಯದ ಅಬಕಾರಿ ಉಪನಿರೀಕ್ಷಕ ಸೂಗೂರೇಶ ಅವರು ಯಡ್ರಾಮಿ ತಾಲೂಕಿನ ಮಳ್ಳಿ-ಚಾಮನಾಳೆ ರಸ್ತೆಯಲ್ಲಿ ಬೆಳಿಗ್ಗೆ ರಸ್ತೆ ಕಾವಲು ಮಾಡುತ್ತಿದ್ದಾಗ ಹೀರೊ ಹೊಂಡಾ ದ್ವಿ ಚಕ್ರ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ವಾಹನ ದೂರದಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಅವರ ವಾಹನ ತಪಾಸಣೆ ಮಾಡಿದಾಗ ವಾಹನದಲ್ಲಿ ಅಕ್ರಮವಾಗಿ ೨೦ ಲೀಟರ್ ಕಳ್ಳಭಟ್ಟಿ ಸರಾಯಿ ಸಾಗಾಣಿಕೆ ಮಾಡುತ್ತಿರುವದನ್ನು ಜಪ್ತಿಪಡಿಸಲಾಗಿದೆ. ಪರಾರಿಯಾದ ಆರೋಪಿ ಸಿಂದಗಿ ತಾಲೂಕಿನ ಸಾಸಬಾಳ ಗ್ರಾಮದ ಪರಶುರಾಮ ಮಲ್ಲಪ್ಪ ಕಾರಗೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಅಬಕಾರಿ ಉಪ ನಿರೀಕ್ಷಕ ಅಬ್ದುಲ್ ಗಫೂರ ಅವರು ಖಚಿತ ಮಾಹಿತಿಯ ಮೇರೆಗೆ ಅಳಂದ ತಾಲೂಕಿನ ಚಿತಲಿ ಗ್ರಾಮದಲ್ಲಿ ಚಹಾ ಹೊಟೇಲ್ ಮೇಲೆ ಅಬಕಾರಿ ದಾಳಿ ನಡೆಸಿ ೩ ಲೀಟರ ಕಳ್ಳಭಟ್ಟಿ ಸರಾಯಿ ಜಪ್ತಿ ಮಾಡಿದ್ದು, ಪರಾರಿಯಾದ ಚಿತ್ತಲಿ ಗ್ರಾಮದ ಆರೋಪಿ ಗಣಪತಿ ಭೀಮಶ್ಯಾ ಕತ್ತಿಕೇರಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮೇಲ್ಕಂಡ ಜಪ್ತಿಪಡಿಸಲಾದ ಒಟ್ಟು ವಸ್ತುಗಳ ಹಾಗೂ ವಾಹನದ ಅಂದಾಜು ಮೌಲ್ಯ ೩೮,೦೦೦ ರೂ. ಇರುತ್ತದೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.