ಕಲಬುರಗಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಇನ್ಫ್ಲೂಎಂಜಾ ಲೈಕ್ ಇಲ್‍ನೆಸ್ (IಐI), ತೀವ್ರ ಉಸಿರಾಟಿನ ತೊಂದರೆ (SಂಖI) ಹಾಗೂ ತೀವ್ರ ರೀತಿಯ ಅರೋಗ್ಯ ಸಮಸ್ಯೆಯನ್ನು ಹೊಂದಿರುವ ರೋಗಿಗಳನ್ನು ಪತ್ತೆ ಹಚ್ಚಲು ಚುನಾವಣಾ ಮತಗಟ್ಟೆವಾರು ಸಾರ್ವತ್ರಿಕ ಸಮೀಕ್ಷೆ ನಡೆಸಲಾಗುತ್ತದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಈ ಸಮೀಕ್ಷೆ ಮತದಾರರ ಪಟ್ಟಿ ಆಧಾರದ ಮೆಲೆ ಮತಗಟ್ಟೆ ಅಧಿಕಾರಿಯ ವ್ಯಾಪ್ತಿಯನ್ನು ಒಂದು ಘಟಕವನ್ನಾಗಿ ತೆಗೆದುಕೊಂಡು ಮನೆ-ಮನೆ ಭೇಟಿ ನೀಡಿ ಮೂರು ದಿನದೊಳಗೆ ಕುಟುಂಬಗಳ ಮಾಹಿತಿ ಸಂಗ್ರಹಿಸುವ ಯೋಜನೆ ಹೊಂದಲಾಗಿದೆ. ಇದಕ್ಕಾಗಿ ಹೆಲ್ತ್ ವಾಚ್ ಮೋಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದರು.
ಸಮೀಕ್ಷೆ ಕಾರ್ಯದ ಅನುಕೂಲಕ್ಕಾಗಿ ಆರೋಗ್ಯ ಸಿಬ್ಬಂದಿಗಳ ಜೊತೆಗೆ ಶಿಕ್ಷಕರ ಸೇವೆಯನ್ನು ಪಡೆಯಲಾಗುತ್ತದೆ. ಮಾಹಿತಿ ಸಂಗ್ರಹಣೆಗೆ ಮನೆಗೆ ಬರುವ ಮತಗಟ್ಟೆ ಅಧಿಕಾರಿ ಮತ್ತು ಶಿಕ್ಷಕರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಡಿ.ಸಿ. ಶರತ್ ಬಿ. ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅಡ್ಡಿಪಡಿಸಿದರೆ ಕಠಿಣ ಕ್ರಮ: ಆರೋಗ್ಯ ಸಮೀಕ್ಷೆಗೆ ಬರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಯಾರಾದರು ಅಡ್ಡಿಪಡಿಸಿದಲ್ಲಿ ಅಂತವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಶರತ್ ಬಿ. ಎಚ್ಚರಿಕೆ ನೀಡಿದ್ದಾರೆ.