ಸುರಪುರ: ನಗರದ ಮೊಜಂಪುರ್ ಗಲ್ಲಿಯಲ್ಲಿನ ನರಸಿಂಹ ದೇವರ ದೇವಸ್ಥಾನದ ಬಳಿಯಲ್ಲಿನ ಚರಂಡಿ ಕಟ್ಟಿ ನೀರೆಲ್ಲ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾರ್ಡ್‍ನ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ವಾರ್ಡಿನ ನೂರಾರು ಮನೆಗಳ ನೀರು ಹರಿದು ಬಂದು ರಸ್ತೆಯ ಮೇಲೆ ಹರಿಯುವುದರಿಂದ ಇಡೀ ರಸ್ತೆ ತುಂಬೆಲ್ಲಾ ಹೊಲಸು ನೀರು ಹರಿಯುತ್ತಿದೆ ಎಂದು ಜನತೆ ರೋಷಿ ಹೋಗಿದ್ದಾರೆ.
ಇದರ ಕುರಿತು ಸಾಮಾಜಿಕ ಕಾರ್ಯಕರ್ತ ಅಬೀದ್ ಹುಸೇನ್ ಪಗಡಿ ಮಾತನಾಡಿ,ಅನೇಕ ತಿಂಗಳುಗಳಿಂದ ನೀರು ರಸ್ತೆಯ ಮೇಲೆ ಹರಿಯುತ್ತಿದೆ,ಚರಂಡಿ ಸ್ವಚ್ಛಗೊಳಿಸಲು ಅನೇಕಬಾರಿ ನಗರಸಭೆಯವರಿಗೆ ಮೌಖಿಕವಾಗಿ ಮನವಿ ಮಾಡಿದರು ಪ್ರಯೋಜನೆಯಾಗುತ್ತಿಲ್ಲ,ಇದರಿಂದ ಜನರು ಈ ರಸ್ತೆಯ ಮೇಲೆ ತಿರುಗಾಡುವುದು ದುಸ್ಥರವಾಗಿದೆ.
ಚರಂಡಿ ನೀರು ಗಬ್ಬು ನಾಥದಿಂದ ಜನರಲ್ಲಿ ರೋಗ ರುಜಿನ ಹರಡುವ ಭೀತಿ ಶುರುವಾಗಿದೆ.ರಾಡಿ ನೀರಿನಿಂದ ಸೊಳ್ಳೆಗಳು ಹುಟ್ಟಿಕೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.ಕೂಡಲೆ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಚರಂಡಿ ಸ್ವಚ್ಛಗೊಳಿಸಿ ದುರಸ್ಥಿಗೊಳಿಸಬೇಕು ಇಲ್ಲವಾದರೆ ಸಾರ್ವಜನಿಕರೊಂದಿಗೆ ಹೋರಾಟ ನಡೆಸಬೇಕಾಗಲಿದೆ ಎಂದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.