ಕಲಬುರಗಿ: ನಿನ್ನೆ ವಾಡಿ ಪಟ್ಟಣದ ಹೊರವಲಯದ ಚಾಮನೂರ ಹಳ್ಳದಲ್ಲಿ ಪಟ್ಟಣದ ಪ್ರಕಾಶ್ ಗಂಗಾರಾಮ ಗೌಳಿ ಎಂಬುವವರ ಎಮ್ಮೆ ಮೇಯಲು ಹೋದ ಸಂದರ್ಭದಲ್ಲಿ ಹಸಿ ಗೋಧಿ ಹಿಟ್ಟಿನಲ್ಲಿ ಜಿಲೇಟಿನ್ನ ಮಿಶ್ರಿತ ಕಚ್ಚಾಬಾಂಬ್ ಸ್ಫೋಟಕ ತಯಾರಿಸಿ ಗೋಮಾಳದಲ್ಲಿ ಬಿಸಾಕಿದ್ದರಿಂದಲೇ ಅದರ ಬಾಯಿಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು ಎಂದು ಹೇಳಲಾಗುತ್ತಿದೆ.
ಆದರೆ ಎಮ್ಮೆಯು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು, ಘಟನೆ ನಡೆದು 24 ಗಂಟೆ ಕಳೆದರೂ ಘಟನೆ ಬಗ್ಗೆ ಎಫ್.ಐ.ಆರ್ ದಾಖಲಿಸಿದ ಪೊಲೀಸರ ಕಾಯ೯ ವೈಖರಿ ಬಗ್ಗೆ ಪ್ರಾಣಿ ಪ್ರಿಯರಿಗೆ ನೋವುಂಟಾಗಿತ್ತು.
ಈ ಕುರಿತು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಹುಣಚಿರಾಯ(ಕೇಶವ) ಮೋಟಗಿ, ಪೊಲೀಸರಿಗೆ ಒತ್ತಾಯಿಸಿದ ನಂತರ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿದ ಮೋಟಗಿ, ಸದರಿ ಬಾಂಬ್ ಸ್ಫೋಟವು ಮಾಂಸ ದಂಧೆ ಕೋರರಿಂದ ನಡೆದಿದೆ ಎಂದು ಶಂಕಿಸಲಾಗಿದೆ ಮತ್ತು ಸ್ಥಳೀಯರು ಈ ಘಟನೆಯಲ್ಲಿ ಭಾಗಿಯಾಗಿರುವ ಬಗ್ಗೆಯೂ ತನಿಖೆಯಿಂದ ತಿಳಿದುಬರಲಿದೆ. ಆದರೆ ಮಾಂಸ ದಂಧೆ ನಡೆಸುತ್ತಿರುವ ಕಿಡಿಗೇಡಿಗಳಿಂದ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾನಿಗೆ ಒಳಗಾಗಿರುವ ಎಮ್ಮೆ ಮಾಲೀಕನಿಗೆ ಶೀಘ್ರ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಪೊಲೀಸ್ ಇಲಾಖೆಯ ಬಾಂಬ್ ತನಿಖಾ ತಂಡ ಕೂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.