ವಿಶಾಖಪಟ್ಟಣ: ಇಂದು ಬೆಳಿಗ್ಗೆ ಸಮೀಪದ ಆರ್.ಆರ್.ವೆಂಕಟಾಪುರದಲ್ಲಿನ ಎಲ್ ಜಿ ಪಾಲಿಮಾರ್ಸ್ ನಲ್ಲಿ ಘಟಿಸಿದ ಅನಿಲ ಸೋರಿಕೆಯಿಂದ ಮೃತಪಟ್ಟವರ ಕುಟುಂಬಗಳಿಗೆ 1 ಕೋಟಿ ರೂ.ಪರಿಹಾರವನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಘಟನೆ ನಂತರ ಅಸ್ವಸ್ಥರು ದಾಖಲಾಗಿರುವ ಸಮೀಪದ ಕಿಂಗ್ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪರಿಹಾರವನ್ನು ಸಿ ಎಂ ಜಗನ್ ಘೋಷಣೆ ಮಾಡಿದ್ದಾರೆ.
ಈ ಘಟನೆಯಲ್ಲಿ ಅಸ್ವಸ್ಥಗೊಂಡಿರುವವರಿಗೆ ತಲಾ 1 ಲಕ್ಷ, ವೆಂಟಿಲೆಟರ್ ನಲ್ಲಿರುವವರಿಗೆ ತಲಾ 10 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ. ಹಾಗೂ ಪಾಲಿಮಾರ್ಸ್ ಕಾರ್ಖಾನೆಯ ಸಮೀಪ ಇರುವ ಮನೆಗಳಿಗೆ 10 ಸಾವಿರ ನೀಡುವುದಾಗಿಯೂ ಹೇಳಿದ್ದಾರೆ.
ದುರಂತದಿಂದ ಸಂಕಷ್ಟ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಕಾರ್ಖಾನೆ ಸ್ಥಳಾಂತರ ನಂತರದಲ್ಲಿ ಮರು ಆರಂಭದಾಗ ಅಲ್ಲಿಯೇ ಉದ್ಯೋಗ ನೀಡುವ ಭರವಸೆಯನ್ನು ಜಗನ್ ನೀಡಿದ್ದಾರೆ.
ಮುಂಜಾನೆ ಜರುಗಿದ ಈ ಘಟನೆಯಿಂದ ಕಾರ್ಖಾನೆಯ ವಿಷಾನಿಲವು ಗಾಳಿಯಲ್ಲಿ ಹರಡಿದ್ದು, ಸುತ್ತಮುತ್ತಲ ಸುಮಾರು 20 ಹಳ್ಳಿಗಳಿಗೂ ಹರಡಿದೆ ಎನ್ನಲಾಗುತ್ತಿದೆ. ಇದುವರೆಗೆ ಸುಮಾರು 800 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದಾಜು 1500 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಎನ್ ಡಿ ಆರ್ ಎಫ್ ಡಿಜಿ ಎಸ್.ಎನ್.ಪ್ರಧಾನ್ ಮಾಹಿತಿ ನೀಡಿದ್ದಾರೆ.