ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೊರೊನಾ ಕುರಿತು ರಚಿಸಲಾದ ಹೆಲ್ತ್ ವಾಚ್ ಯಾಪ್ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಮಾತನಾಡಿ,ಈ ಹಿಂದೆ ಎಲ್ಲಾ ಮನೆಗಳಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.ಆದರೆ ಈಗ ಹೆಲ್ತ್ ವಾಚ್ ಯಾಪ್ ಮೂಲಕ ತಾವೆಲ್ಲರು ನಿಮ್ಮ ನಿಮ್ಮ ಪ್ರದೇಶಗಳಲ್ಲಿ ಸರ್ವೆ ನಡೆಸಿ ಪ್ರತಿ ಮನೆಯಲ್ಲಿರುವವರ ಆರೋಗ್ಯದ ಕುರಿತಾದ ಮಾಹಿತಿಯನ್ನು ಈ ಯಾಪ್‍ಲ್ಲಿರುವ ವಿವಿರಣೆಯ ಅರ್ಜಿಯಲ್ಲಿ ತುಂಬಿ ಆನ್ಲೈನ್ ಮೂಲಕ ರವಾನಿಸುವಂತೆ ತಿಳಿಸಿದರು.
ನಿಮ್ಮ ಏರಿಯಾಗಳಲ್ಲಿನ ಯಾವುದೆ ಕುಟುಂಬಸ್ಥರಿಗೆ ಆರೋಗ್ಯದಲ್ಲಿ ಏನಾದರು ಸಮಸ್ಯೆ ಕಂಡು ಬಂದಲ್ಲಿ ಅದನ್ನು ಈ ಯಾಪ್ ಮೂಲಕ ತಿಳಿಯಲು ಸುಲಭವಾಗಲಿದೆ. ಆದ್ದರಿಂದ ತಾವೆಲ್ಲರೂ ಈ ಯಾಪ್‍ನ್ನು ನಿಮ್ಮ ಮೋಬೈಲಲ್ಲಿ ಡೌನ್ಲೋಡ್ ಮಾಡಿಕೊಳ್ಳುವಂತೆ ತಿಳಿಸಿದರು.ನಂತರ ಯಾಪ್ ಕುರಿತಾಗಿ ಸ್ಕ್ರೀನ್ ಮೂಲಕ ಸಮಗ್ರ ಮಾಹಿತಿಯನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಭಗವಾನ್ ಸೋನವಾಣೆ,ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ವೇದಿಕೆ ಮೇಲಿದ್ದರು.ತಹಸೀಲ್ದಾರ್ ನಿಂಗಣ್ಣ ಬಿರಾದಾರ್,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ. ನಾಯಕ,ಬಿಇಒ ನಾಗರತ್ನ ಓಲೆಕಾರ್,ಸಿಡಿಪಿಒ ಲಾಲಸಾಬ್,ನಗರಸಭೆ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ ಸೇರಿದಂತೆ ಅನೇಕ ಜನ ಶಿಕ್ಷಕರಿದ್ದರು.