ಚಿತ್ತಾಪುರ: ತಾಲೂಕಿನ ಅಳ್ಳೊಳ್ಳಿ ಶಾಖೆಯಿಂದ ವಿದ್ಯುತ್ ಸರಬರಾಜಿನಲ್ಲಿ ಉಂಟಾಗುತ್ತಿದ್ದ ತೊಂದರೆ ತಪ್ಪಸಿಲು ಜೆಸ್ಕಾಂ ಚಿತ್ತಾಪುರ ಉಪವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಪರಿಣಾಮ ಅಳ್ಳೊಳ್ಳಿ ಶಾಖೆಯ 3 ನೂತನ 11 ಕೆವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ನಿರ್ಮಾಣ ಮಾಡಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಅಳ್ಳೊಳ್ಳಿ ಗ್ರಾಮದ ಬಳಿ ನಿರ್ಮಿಸಿರುವ 33 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಿಂದ ಸುಮಾರು 39 ಗ್ರಾಮಗಳು ಹಾಗೂ 19 ತಾಂಡಗಳ ವ್ಯಾಪ್ತಿಯಡಿಯಲ್ಲಿ ಸುಮಾರು 120 ಕಿಮಿ, ವರೆಗೆ ಒಂದೇ ಮಾರ್ಗವಿತ್ತು. ಹಾಗಾಗಿ, ಈ ಯಾವುದಾದರೂ ಒಂದು ಗ್ರಾಮದಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾದರೆ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿತ್ತು. ಆದ್ದರಿಂದ ಈ ಮಾರ್ಗದಲ್ಲಿ 3 ನೂತನ ಎನ್ ಜಿ ವೈ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸುವ ಮೂಲಕ 24 ಗಂಟೆ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದ್ದು.
ಪ್ರಸ್ತುತ ಮೂರು ಹಳೆಯ ಮಾರ್ಗಗಳಾದ ಅಳ್ಳೊಳ್ಳಿ, ಯಾಗಾಪುರ ಹಾಗೂ ಲಾಡ್ಲಾಪುರ ವಿದ್ಯುತ್ ಸರಬರಾಜು ಕೇಂದ್ರಗಳ ಜೊತೆಗೆ ಮೂರು ಎನ್ ಜಿ ವೈ ಕೇಂದ್ರಗಳನ್ನು ಹಾಜಿ ಸರೋವರ, ದಂಡಗುಂಡ ಹಾಗೂ ರಾಮತೀರ್ಥ ಗ್ರಾಮಗಳಲ್ಲಿ ಸ್ಥಾಪಿಸಿ ಈ ಕೇಂದ್ರಗಳ ಅಡಿಯಲ್ಲಿ ಬರುವ ಗ್ರಾಮಗಳಿಗೆ ನಿರಂತರ 24 ಗಂಟೆ ವಿದ್ಯುತ್ ಸರಬರಾಜು ಮಾಡಲು ಹಾಗೂ ಪಂಪಸೆಟ್ ಗಳಿಗೆ 7 ತಾಸು ಮೂರು ಫೇಸ್ ವಿದ್ಯುತ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕರು ಹೇಳಿದ್ದಾರೆ.