ಸುರಪುರ: ಇಂದು ಕೊರೊನಾ ಎಂಬ ಮಹಾಮಾರಿ ಎಲ್ಲೆಡೆ ಹರಡುತ್ತಿದೆ.ಇದರಿಂದ ಜನರು ದೂರವಿರಲು ಅನೇಕ ಮುಂಜಾಗ್ರತೆ ಕ್ರಮವನ್ನು ವಹಿಸುವುದು ಅವಶ್ಯಕವಾಗಿದೆ.ಆದ್ದರಿಂದ ಎಲ್ಲರು ಕೊರೊನಾ ಜಾಗೃತಿ ವಹಿಸಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವಂತೆ ಸುರಪುರ ಠಾಣೆ ಪಿಎಸ್‌ಐ ಚೇತನ್ ಜನ ಜಾಗೃತಿ ಮೂಡಿಸಿದರು.
ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗ್ರಾಮೀಣ ಪ್ರದೇಶದಿಂದ ಸಂತೆಗಾಗಿ ಬರುವ ಜನರಿಗೆ ಮಾಸ್ಕ್ ನೀಡುವ ಜೊತೆಗೆ ಮಾಸ್ಕ್ ಧರಿಸುವುದರಿಂದ ಇರುವ ಉಪಯೋಗದ ಬಗ್ಗೆ ಅರಿವು ಮೂಡಿಸಿದರು.ಅಲ್ಲದೆ ಕೊರೊನಾ ಎಂಬುದಕ್ಕೆ ಔಷಧಿಗಿಂತಲು ನಾವು ಮುಂಜಾಗ್ರತೆ ವಹಿಸುವುದೆ ಮುಖ್ಯವಾಗಿದೆ.ಅದು ಯಾವಾಗ ಯಾರಿಂದ ಹರಡುತ್ತದೆ ಎಂದು ಹೇಳಲಾಗದು.ಆದ್ದರಿಂದ ಎಲ್ಲರು ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಅಲ್ಲದೆ ಸ್ಯಾನಿಟೈಜರ್ ಅಥವಾ ಸಾಬೂನಿನಿಂದ ಆಗಾಗ ಕೈಗಳನ್ನು ತೊಳೆಯಬೇಕು ಮತ್ತು ಮುಖ್ಯವಾಗಿ ಮೂಗು ಮತ್ತು ಬಾಯಿಗೆ ಕೈ ತಾಗದಂತೆ ಸದಾ ಎಚ್ಚರಿಕೆ ವಹಿಸಬೇಕೆಂದರು.ಗಂಟಲು ಒಣಗಲು ಬಿಡದೆ ಹೆಚ್ಚೆಚ್ಚು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿದೆ.ಇವುಗಳನ್ನು ತಪ್ಪದೆ ಪಾಲಿಸಿದರೆ ಕೊರೊನಾದಿಂದ ಎಲ್ಲರು ಮುಕ್ತರಾಗಿರಲು ಸಾಧ್ಯವಿದೆ ಎಂದರು.ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಮಾಸ್ಕ್‌ಗಳನ್ನು ವಿತರಿಸಿದರು.