ಸುರಪುರ: ಇಲ್ಲಿಯವರೆಗೆ 8 ಗಂಟೆಗಳ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕೆಲಸದ ಮಿತಿಯನ್ನು 12 ಗಂಟೆಗೆ ಹೆಚ್ಚಿಸಲು ಮುಂದಾಗಿರುವ ಸರಕಾರ ನಡೆಯನ್ನು ಖಂಡಿಸುವುದಾಗಿ ಎಐಟಿಯುಸಿ ಜಿಲ್ಲಾ ಉಧ್ಯಕ್ಷ ದೇವಿಂದ್ರಪ್ಪ ಪತ್ತಾರ ಬೇಸರ ವ್ಯಕ್ತಪಡಿಸಿದರು.
ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಮತ್ತು ಎಐಟಿಯುಸಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಹೊರಟಿರುವುದು ಸರಿಯಲ್ಲ.ಕೈಗಾರಿಕಾ ವಿವಾದಗಳ ಕಾಯ್ದೆಯ ಅಧ್ಯಾಯ 5 ಬಿ ಗೆ ತಿದ್ದುಪಡಿ ತಂದು ಕಾರ್ಮಿಕರ ಮಿತಿಯನ್ನು ನೂರರಿಂದ ಮೂರು ನೂರಕ್ಕೆ ಹೆಚ್ಚಿಸುತ್ತಿರುವುದು ಸೇರಿದಂತೆ ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ರೀತಿಯ ಕ್ರಮ ಸರಿಯಲ್ಲ.
ಅಂತರರಾಜ್ಯ ಕಾರ್ಮಿಕರ ಹೋಗಲು ಮತ್ತು ಬರಲು ಉಚಿತ ರೈಲಿನ ವ್ಯವಸ್ಥೆ ಮಾಡಬೇಕು.ಕೋವಿಡ್-19 ವಾರಿಯರ್ಸ್ ಎಲ್ಲರಿಗೂ 50 ಲಕ್ಷ ರೂಪಾಯಿಗಳ ಜೀವ ವಿಮೆ ನೀಡಬೇಕೆಂದು ಆಗ್ರಹಿಸಿದರು.ಅಲ್ಲದೆ 2020-21 ನೇ ಸಾಲಿನ ಬಜೆಟ್‍ನಲ್ಲಿ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿಟ್ಟಿರುವ 375 ಕೋಟಿ ರೂಪಾಯಿಗಳ ವಿವೇಚನಾ ನಿಧಿಯನ್ನು ರಾಜ್ಯದ 7.5 ಲಕ್ಷ ಕಾರ್ಮಿಕರಿಗೆ 5 ಸಾವಿರ ರೂಪಾಯಿಗಳ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಕಾರ್ಮಿಕ ನಿರೀಕ್ಷಕರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಯ್ಯ ವಗ್ಗಾ,ದೇವಪ್ಪ ನಗರಗುಂಡ,ಭೀಮಣ್ಣ ಭಜಂತ್ರಿ,ತಿಮ್ಮಯ್ಯ ತಳವಾರ,ಬಸವರಾಜ ಸೇರಿದಂತೆ ಅನೇಕರಿದ್ದರು.