ಚಿತ್ತಾಪುರ: ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕು. ಇದು ಕೇವಲ ಅರಣ್ಯ ಇಲಾಖೆಯವರ ಕೆಲಸವಲ್ಲ, ಹಸಿರು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಹಸಿಲ್ದಾರ್ ಉಮಾಕಾಂತ್ ಹಳ್ಳೆ ಹೇಳಿದರು.
ಪಟ್ಟಣದ ನೀರಿನ ಶುದ್ಧೀಕರಣ ಘಟಕದ ಆವರಣದಲ್ಲಿ ಪುರಸಭೆ, ಅರಣ್ಯ ಇಲಾಖೆ, ಮತ್ತು ತೋಟಗಾರಿಕೆ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಕಲ ಜೀವಿಗಳ ಅಳಿವು-ಉಳಿವು ನಿರ್ಧರಿಸುವ ಪರಿಸರದ ಕುರಿತು ಕಾಳಜಿ ಬೆಳೆಸಿಕೊಳ್ಳುವುದು ಅವಶ್ಯಕ ಎಂದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗಿಡ-ಮರಗಳು ಅವನತಿಗೊಳ್ಳುತ್ತಿದ್ದು ಕಲುಷಿತ ಗಾಳಿ ಬೀಸುತ್ತಿದೆ, ಅನಾರೋಗ್ಯದ ದವಡೆಯಲ್ಲಿ ಮಾನವಕುಲ ನರಳುತ್ತಿದ್ದು, ಪ್ರತಿಯೊಬ್ಬರೂ ಮನೆಗಳಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವುದರೊಂದಿಗೆ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ ಮಾದರಿಯಾಗಬೇಕು ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯು ಸದಾ ನಿಮ್ಮ ಜೊತೆ ಇರುತ್ತದೆ ಎಂದು ವಲಯ ಅರಣ್ಯಾಧಿಕಾರಿಗಳಾದ ವಿಜಯಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳಾದ ಮನೋಜ್ ಕುಮಾರ್ ಗುರಿಕಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಸಿದ್ದು ಅಣಬಿ, ಅನಿಲ್ ಕುಮಾರ್, ಸಂತೋಷ್, ಅರಣ್ಯ ರಕ್ಷಕ ರಮೇಶ್, ಇತರರಿದ್ದರು.