ಕಲಬುರಗಿ : ಇಲ್ಲಿನ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಪಿಡಿಓ ಕಾರು ಡಿಕ್ಕಿ ಹೊಡೆದ ಪರಿಣಾಮ ಗ್ರಾಮಸ್ಥನೋರ್ವ ಸಾವನ್ನಪ್ಪಿದ ಘಟನೆ ಜರುಗಿದ್ದು, ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ದಶರತ್ ಪಾತ್ರೆ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಬಾಬು ದಸ್ತಗೀರ್ ಮುಲಗೆ (60) ಮೃತಪಟ್ಟಿದ್ದಾರೆ ಎಂದು ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಸಂತೆ ವಿಚಾರವಾಗಿ ಪಿಡಿಓ ಮತ್ತು ಗ್ರಾಮಸ್ಥರು ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ಗಾಬರಿಗೊಂಡ ಅಧಿಕಾರಿ ತಮ್ಮ ಕಾರು ಚಾಲಕನೊಂದಿಗೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾಗ ಕಾರು ಚಾಲಕ ಗಾಬರಿಗೊಂಡ ಹಿನ್ನೆಲ್ಲೇ ಗ್ರಾಮದ ಬಾಬು ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಕಾರು ಡಿಕ್ಕಿಯಾಗಿ ಗಾಯಗೊಂಡ ಬಾಬು ದಸ್ತಗೀರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಸ್ಪಿ ಯಡಾ ಮಾರ್ಟಿನ್, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸೇರಿ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.