ಕಲಬುರಗಿ: ಪ್ರಾಮಾಣಿಕ ಸಮಾಜ ಸೇವೆಗೈಯುತ್ತಿರುವರನ್ನು ಗುರುತಿಸಿ ಗೌರವಿಸುವ ಕಾರ್ಯದಿಂದ ಸಧೃಢ ಸಮಾಜ ಕಟ್ಟುವುದಕ್ಕೆ ಸಹಕಾರಿಯಾಗುತ್ತದೆ ಎಂದು ಶ್ರೀನಿವಾಸ ಸರಡಗಿಯ ಶ್ರೀ ಷ.ಬ್ರ. ಡಾ. ರೇವಣಸಿದ್ಧ ಶಿವಾಚಾರ್ಯರು ನುಡಿದರು.
ನಿನ್ನೆ ನಗರದ ಹೊರವಲಯದಲ್ಲಿರುವ ಉಪಳಾಂವ ಗ್ರಾಮದಲ್ಲಿರುವ ಶ್ರೀರಾಮ್ ಕನ್ನಡ ಕಾನ್ವೆಂಟ್ ಶಾಲೆಯ ಆವರಣದಲ್ಲಿ ಅಖಿಲ ಭಾರತ ಯುವಜನ ಒಕ್ಕೂಟ ಹಾಗೂ ಗೆಳೆಯರ ಬಳಗದ ವತಿಯಿಂದ ಯುವಮುಖಂಡ, ಸಮಾಜ ಚಿಂತಕ ಶ್ರೀ ಚಂದ್ರಕಾಂತ ಬಿರಾದಾರ ಅವರ ಹುಟ್ಟುಹಬ್ಬದ ನಿಮಿತ್ಯ “ಕೊರೊನಾ ವರಿಯರ‍್ಸ್”ಗೆ ವಿಶೇಷ ಸನ್ಮಾನ ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ. ಮಾಲಕರೆಡ್ಡಿ ಹೊಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ “ಆರ್ಸೆನಿಕ್ ಅಲ್ಬಂ ೩೦” ಎಂಬ ಹೊಮಿಯೊಪಥಿ ಮಾತ್ರೆಗಳನ್ನು ಉಚಿತವಾಗಿ ಜನರಿಗೆ ವಿತರಿಸಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ದೇಶದೊಳಗೆ ತಮ್ಮ-ತಮ್ಮ ಕಾರ್ಯ ಮಾಡುತ್ತಾ ಶಾಂತಿ ನೆಮ್ಮದಿಯಿಂದ ಜೀವನ ಮಾಡುತ್ತಾ ಇರಿ ಎಂದು ಗಡಿ ಕಾಯುವ ಸೈನಿಕ ಹೇಳಿದರೆ, ನೀವೆಲ್ಲ ಕುಟುಂಬ ಸಮೇತ ಮನೆಯಲ್ಲಿದ್ದುಕೊಂಡು ಜೀವನ ಸಾಗಿಸಿರಿ ಕೊರೊನಾ ರೋಗ ತಮಗೆ ಹರಡದಂತೆ ನಾವೂ ಹೊರಗಿದ್ದುಕೊಂಡೆ ನಿಮಗೆ ಜೋಪಾನ ಮಾಡುತ್ತೇವೆ ಎಂದು ಕೊರೊನಾ ವರಿಯರ‍್ಸ್ ಹೇಳುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ನಮ್ಮನ್ನೆಲ್ಲ ಜೋಪಾನ ಮಾಡುತ್ತಿರುವರನ್ನು ಈ ಕಾರ್ಯಕ್ರಮದಲ್ಲಿ ಸಂಘಟನೆಯು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಸನ್ಮಾನಿಸಿಕೊಂಡು ಮಾತನಾಡಿದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ. ಮಾಲಕರೆಡ್ಡಿ ಹೋಮಿಯೊಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಪಿ. ಸಂಪತರಾವ್ ಮಾತನಾಡುತ್ತಾ ಕೊರೊನಾ ರೋಗಕ್ಕೆ ಔಷಧಿ ಇನ್ನು ಬಂದಿಲ್ಲ ಆದರೆ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಜೀವಿಸಬೇಕು. ಯೋಗ, ಊಟ, ಸರಿಯಾದ ಸಮಯಕ್ಕೆ ನಿದ್ರೆ ಮಾಡುವದರೊಂದಿಗೆ ಆಯುಷ್ ಇಲಾಖೆಯ ಹೊಮಿಯೊಪಥಿ “ಆರ್ಸೆನಿಕ್ ಅಲ್ಬಂ ೩೦” ಮಾತ್ರೆ ಸಮಯಕ್ಕೆ ಸರಿಯಾಗಿ ತೆಗೆದುಕೊಂಡು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಘಟನೆ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಮಾತನಾಡುತ್ತಾ ವಿವಿಧ ಇಲಾಖೆಗಳಲ್ಲಿ ಪ್ರಾಮಾಣಿಕ ಸೇವೆಗೈಯುತ್ತಿರುವರನ್ನು ಹಳ್ಳಿಗಳಿಗೆ ಪರಿಚಯಿಸುವುದರೊಂದಿಗೆ ಗೌರವಿಸಿ ಸನ್ಮಾನಿಸುವ ಕಾರ್ಯ ಸಂಘಟನೆ ಮಾಡುತ್ತಿದೆ. ಸಧ್ಯದ ಪರಿಸ್ಥಿತಿಯಲ್ಲಿ ಕೊರೊನಾ ವೈರಾಣು ನಗರದಿಂದ ಹಳ್ಳಿಗೆ ವೇಗವಾಗಿ ಹರಡುತ್ತಿರುವುದರಿಂದ ಜನ ಜಾಗೃತಿ ಮೂಡಿಸುವ ಸರಣಿ ಕಾರ್ಯಕ್ರಮ ನಮ್ಮ ಸಂಘಟನೆ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿವೆ ಎಂದು ಹೇಳಿದರು.
ವೇದಿಕೆಯ ಮೇಲೆ ಡಾ. ರಾಜೇಂದ್ರ ಪಾಟೀಲ ಹರವಾಳ, ಸಂಗೀತ ಕಲಾವಿದ ಸಂಗಮೇಶ ಶಾಸ್ತ್ರೀ ಮಾಶಾಳ, ಶ್ರೀರಾಮ ಕನ್ನಡ ಕಾನ್ವೆಂಟ್ ಸಂಸ್ಥೆಯ ಅಧ್ಯಕ್ಷ ಗೌಡೇಶ ಬಿರಾದಾರ, ಚಂದ್ರಕಾಂತ ಎಮ್. ಬಿರದಾರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೊರೊನಾ ವರಿಯರ‍್ಸ್‌ಗಳಾದ ಡಾ. ಪಿ. ಸಂಪತ್‌ರಾವ, ಪೊಲೀಸ್ ಪೇದೆ ಶ್ರೀನಾಥ, ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿ ರಾಚಮ್ಮ ಹಾಗೂ ಗುರು, ಆಶಾ ಕಾರ್ಯಕರ್ತೆ ಮಲ್ಲಮ್ಮ ನಿಂಬಾಳ, ಪತ್ರಿಕಾ ವರದಿಗಾರರಾದ ಭೀಮಾಶಂಕರ ಫಿರೋಜಾಬಾದರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮೀಪುತ್ರ ಬಿರಾದಾರ, ಚಂದ್ರಕಾಂತ ಮುತ್ತಗಿ, ಉಮೇಶ ದೇಗಾಂವ, ಶರಣಬಸಪ್ಪ ಪಾಟೀಲ ಉದನೂರು, ಸಂಗಮನಾಥ ಕಣಸೂರ, ಯುವಮುಖಂಡ ವಿರೇಶ ಬಿರಾದಾರ, ಶಿಕ್ಷಕಿಯರಾದ ಶ್ರೀದೇವಿ, ಜ್ಯೋತಿ, ಶಿವಲೀಲಾ, ಸಂಗೀತಾ, ಶಾಂತಾ ಸೇಡಂ, ಓಂದೇವಿ ಬಿರಾದಾರ, ಪತ್ರಿಕಾ ಛಾಯಾಗ್ರಾಹಕ ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.