ಕಲಬುರಗಿ: ರಾಜ್ಯದಲ್ಲಿ ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಮೂರು ಪಕ್ಷಗಳು ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು ಉತ್ತರ ಕರ್ನಾಟಕ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನು ಏಕೆ ಪರಿಗಣಿಸಲಿಲ್ಲವೆಂದು ಅಖಿಲ ಭಾರತ ವೀರಶೈವ ಮಹಾಸಭೆಯ ಕಲಬುರಗಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಯ್ಯ ಮಠಪತಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಪಕ್ಷ ಹಾಗೂ ಜೆ.ಡಿ.ಎಸ್. ಮೂರು ಪಕ್ಷಗಳು ವೀರಶೈವ ಲಿಂಗಾಯತ ಸಮುದಾಯವನ್ನು ಚುನಾವಣೆಯಲ್ಲಿ ಕೇವಲ ಮತ ಬ್ಯಾಂಕ ಆಗಿ ಮಾತ್ರ ಪರಿಗಣಿಸುವಂತೆ ಕಾಣುತ್ತಿದೆ. ವಿಶೇಷವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗಲೊಮ್ಮೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ದೊಡ್ಡ ದೊಡ್ಡ ಮಾತಗಳನ್ನಾಡುತ್ತಾರೆ, ಆದರೆ ವೀರಶೈವ ಲಿಂಗಾಯತ ಸಮುದಾಯವನ್ನು ಮತ್ತು ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿರುವುದು ಅತ್ಯಂತ ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದು ಕೇವಲ ಕಲ್ಯಾಣ ಕರ್ನಾಟಕವೆಂದು ಘೋಷಣೆ ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ, ವಾಸ್ತವವಾಗಿ ಸ್ಥಳೀಯ ಶಾಸಕರುಗಳಿಗೆ ಮಹತ್ವದ ಖಾತೆ ನೀಡಬೇಕು.
ಹಿಂದೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗಲೂ ಸಹ ಸಚಿವ ಸಂಪುಟದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲಿಲ್ಲ, ಈಗಲೂ ಕಲ್ಯಾಣ ಕರ್ನಾಟಕ ಭಾಗದಿಂದ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾದ ವೀರಶೈವ ಲಿಂಗಾಯತ ಸಮುದಾಯದ ಯಾವ ಶಾಸಕರಿಗೂ ಮಂತ್ರಿ ಸ್ಥಾನ ನೀಡಿಲ್ಲ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು, ಬರುವ ವಾರದಲ್ಲಿ ನಡೆಯುವ ವಿಧಾನ ಪರಿಷತ್ತಿಗೆ ನಾಮಕರಣ ಸಮಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮುದಾಯದ ನಾಯಕರನ್ನು ನಾಮಕರಣ ಮಾಡಬೇಕು, ಸಚಿವ ಸಂಪುಟದಲ್ಲಿ ಈ ಭಾಗದ ಸಮುದಾಯದ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಬೇಕೆಂದು ಮಠಪತಿಯವರು ಒತ್ತಾಯಿಸಿದ್ದಾರೆ.