ವಾಡಿ: ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಏರಡು ತಿಂಗಳಿಂದ ತಮ್ಮ ಜೀವದ ಹಂಗು ತೊರೆದು ನಿರಂತರವಾಗಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಶ್ರಮಿಸುತ್ತ ಜನರ ಸೇವೆಯಲ್ಲಿರುವ ಕೋವಿಡ್ ವಾರಿಯರ್ಸ್‌ಗಳಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ ಗಾಂಧಿ ಅವರ ೫೦ನೇ ಜನ್ಮ ದಿನಾಚರಣೆ ನಿಮಿತ್ತ ಶುಕ್ರವಾರ ಇಲ್ಲಿನ ಸಾಹೇಬ ಫಂಕ್ಷನ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ವೇದಿಕೆಯಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ವೈದ್ಯರು, ಪೊಲೀಸರು ಹಾಗೂ ಪೌರಕಾರ್ಮಿಕರನ್ನು ಸಾಮೂಹಿಕವಾಗಿ ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು.
ಈ ವೇಳೆ ಮಾತನಾಡಿದ ವಾಡಿ-ಶಹಾಬಾದ ನಗರ ಯೋಜನೆ ಪ್ರಾಧೀಕಾರ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಮುಖಂಡ ಚಂದ್ರಸೇನ ಮೇನಗಾರ, ಸಾಂಕ್ರಾಮಿಕ ರೋಗವನ್ನು ಕಟ್ಟಿಹಾಕಲು ಕೇಂದ್ರ ಸರಕಾರ ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ್ದಾಗ ಇಡೀ ದೇಶದ ಜನರು ಮನೆಯಲ್ಲಿದ್ದರು.
ಆದರೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು, ವೈದ್ಯರು, ಪೌರಕಾರ್ಮಿಕರು ಮತ್ತು ಪೊಲೀಸರು ಮನೆಯಿಂದ ಹೊರಬಂದು ಕೋವಿಡ್ ಕರ್ತವ್ಯದಲ್ಲಿದ್ದರು. ಪ್ರಾಣದ ಹಂಗು ತೊರೆದು ಸೋಂಕಿತರ ಮಧ್ಯೆ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ಕಡೆಗಳಲ್ಲಿ ಸೋಂಕಿತರ ಕುಟುಂಬಸ್ಥರ ದಾಳಿಗೆ ಗುರಿಯಾಗಿ ಜನರ ಆರೋಗ್ಯ ಸೇವೆಗೈದಿದ್ದಾರೆ. ಕ್ರಿಮಿನಾಶಕ ಸಿಂಪರಣೆ, ಸ್ವಚ್ಚತೆ, ಇತರ ಅಗತ್ಯತೆಗಳನ್ನು ಪೌರಕಾರ್ಮಿಕರು ಪೂರೈಸಿದ್ದಾರೆ. ಪೊಲೀಸರು ಅಚ್ಚುಕಟ್ಟಾಗಿ ಭದ್ರತೆ ಒದಗಿಸಿದ್ದಾರೆ. ಪರಿಣಾಮ ನಾವಿಂದು ಸುರಕ್ಷಿತರಾಗಿದ್ದೇವೆ ಎಂದು ಸ್ಮರಿಸಿದರು.
ಬ್ಲಾಕ್ ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಮಾತನಾಡಿದರು. ಕೇಂದ್ರ ಕಾರ್ಮಿಕ ಸಲಹಾ ಸಮಿತಿ ಮಾಜಿ ಸದಸ್ಯ ಭೀಮರಾವ ಧೊರೆ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಸಾಲೋಮನ್, ಮುಸ್ಲಿಂ ಸಮಾಜದ ಅಧ್ಯಕ್ಷ ಮುಕ್ಬುಲ್ ಜಾನಿ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸದಸ್ಯರಾದ ತಿಮ್ಮಯ್ಯ ಪವಾರ, ಮರಗಪ್ಪ ಕಲಕುಟಗಿ, ಸುಗಂಧಾ ಜೈಗಂಗಾ, ಡಾ.ಜುನೈದ್ ಖಾನ್, ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕ ಶರಣಪ್ಪ ಮಡಿವಾಳ, ಕಿರಿಯ ಆರೋಗ್ಯ ಸಹಾಯಕಿ ಅನಿತಾ ಮಲಗೊಂಡ, ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಸೂರ್ಯಕಾಂತ ರದ್ದೇವಾಡಿ, ಈಶ್ವರ ಅಂಬೇಕರ, ಕಾಶೀನಾಥ ಧನ್ನಿ, ಶೇಖ ಕರೀಮ ಪಾಲ್ಗೊಂಡಿದ್ದರು. ಬಾಬುಮಿಯ್ಯಾ ಸ್ವಾಗತಿಸಿದರು. ಶ್ರವಣಕುಮಾರ ಮೌಸಲಗಿ ನಿರೂಪಿಸಿ, ವಂದಿಸಿದರು. ಇದೇ ವೇಳೆ ಸ್ಥಳೀಯ ಪತ್ರಕರ್ತರ ಸೇವೆಯನ್ನೂ ಗುರುತಿಸಿ ಸನ್ಮಾನಿಸಲಾಯಿತು.