ಸುರಪುರ: ಖಾಸಗಿ ದೃಶ್ಯ ಮಾದ್ಯಮದ ನಿರೂಪಕನೊಬ್ಬ ಹಜರತ್ ಖಾಜಾ ಗರೀಬ ಜವಾಜ್ ಅವರನ್ನು ಅಪಮಾನಿಸಿ ಮಾತನಾಡಿರುವದನ್ನು ಖಂಡಿಸಿ ಜಾತ್ಯಾತೀತ ಜನತಾದಳ ಸುರಪುರ ತಾಲೂಕು ಘಟಕದ ಮುಖಂಡರು ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಮಾತನಾಡಿ,ಖಾಜಾ ಗರೀಬ್ ನವಾಜ್ ಅವರು ನಮ್ಮ ಧರ್ಮದ ಮಹಾನ್ ಪುರುಷರು. ಅವರನ್ನು ಇಡೀ ಮುಸ್ಲೀಮ್ ಜನಾಂಗವೇ ಗೌರವಿಸುತ್ತದೆ ಮತ್ತು ಧ್ಯಾನಿಸುತ್ತದೆ.ಅಂತಹ ಒಬ್ಬ ಧಾರ್ಮಿಕ ಪುರುಷನನ್ನು ದರೋಡಿಕೋರ ಎಂದು ಕರೆದಿರುವುದು ಅಕ್ಷಮ್ಯ ಅಪರಾಧವಾಗಿದೆ.ಮಾದ್ಯಮದಲ್ಲಿ ಕೆಲಸ ಮಾಡುವವರು ಎಲ್ಲಾ ಧರ್ಮ ಸಮುದಾಯಗಳನ್ನು ಗೌರವದಿಂದ ಕಾಣುವಂತಿರಬೇಕು.ಆದರೆ ಈ ಖಾಸಗಿ ವಾಹಿನಿಯ ನಿರೂಪಕ ಹೀಗೆ ಅವಾಚ್ಯವಾಗಿ ಕರೆಯುವ ಮೂಲಕ ಇಡೀ ಮುಸ್ಲೀಮ್ ಸಮುದಾಯವನ್ನೆ ಅಪಮಾನಿಸಿದ್ದಾರೆ.ಇದರಿಂದ ಇಡೀ ಜನಾಂಗಕ್ಕೆ ತುಂಬಾ ನೋವಾಗಿದೆ.ಕೂಡಲೆ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರ ಸೋಮನಾಥ ನಾಯಕ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ,ತಿಪ್ಪಣ್ಣ ಪೊಲೀಸ್ ಪಾಟೀಲ್, ನ್ಯಾಯವಾದಿ ಸಂಗಣ್ಣ ಬಾಕಲಿ,ಅಲ್ತಾಫ್ ಸಗರಿ,ಶೌಕತ್ ಅಲಿ,ಶೇಖ್ ಮಹಿಬೂಬ್,ಮಹ್ಮದ್ ಗೌಸ್,ಮಹಿಬೂಬ ಪಾಶಾ,ಗೋಪಾಲ ಬಾಗಲಕೋಟೆ,ವಾಜೀದ್ ನಗನೂರಿ ಸೇರಿದಂತೆ ಅನೇಕರಿದ್ದರು.