ಬೆಂಗಳೂರಿನಲ್ಲಿ ಕೋಡ್ಲಿ ಗ್ರಾಮದ ಕಾರ್ಮಿಕನ ಅಸಹಜ ಸಾವು: ಮೃತದೇಹ ರವಾನೆಗೆ ನೆರವಾದ ಸಂಸದ ಡಾ.ಉಮೇಶ ಜಾಧವ

0
778

ಕಲಬುರಗಿ: ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಸೈಟ್‍ವೊಂದರಲ್ಲಿ ಕಾವಲುಗಾರನ್ನಾಗಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೋಡ್ಲಿ ಗ್ರಾಮದ ವ್ಯಕ್ತಿ ಶನಿವಾರ ರಾತ್ರಿ ತಮ್ಮ ಕೋಣೆಯಲ್ಲಿಯೆ ಅಸಹಜ ಸಾವನಪ್ಪಿದ್ದು, ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಂಸದ ಡಾ.ಉಮೇಶ ಜಾಧವ ಅವರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೋಡ್ಲಿ ಮೂಲದ ಸುಮಾರು 40 ವಯಸ್ಸಿನ ಶರಣಪ್ಪ ತಂ. ಅಂಬಣ್ಣಾ ಇವರು ಬೆಂಗಳೂರಿನ ಮಾರ್ಶಲ್ ಸೆಕ್ಯೂರಿಟಿ ಏಜೆನ್ಸಿಯ ಮೂಲಕ ಕಟ್ಟಡ ನಿರ್ಮಾಣ ಸೈಟ್‍ವೊಂದರಲ್ಲಿ ಕಾವಲುಗಾರನ್ನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ತನ್ನ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗಿದ್ದರು. ಮರುದಿನ ಭಾನುವಾರ ಏಜೆನ್ಸಿಯ ಸಿಬ್ಬಂದಿಗಳು ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದಾಗ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದರು. ಮನೆಯ ಬಾಗಿಲು ಬಾರಿಸಿದಾಗ ಬಾಗಿಲ ತೆರೆಯದ ಕಾರಣ ಕಿಂಡಿ ಮೂಲಕ ವೀಕ್ಷಿಸಿದಾದ ಶರಣಪ್ಪ ಪ್ರಜ್ಞಾಹೀನರಾಗಿದ್ದರು. ಕೂಡಲೆ ಪೊಲೀಸರಿಗೆ ವಿಷಯ ತಿಳಿಸಿ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಒಯ್ಯಲಾಗಿತ್ತಾದರು ಅಷ್ಟರೊಳಗೆ ಅವರು ಸಾವನಪ್ಪಿದ್ದರು.

Contact Your\'s Advertisement; 9902492681

ಈ ವಿಷಯವನ್ನು ಅರಿತ ಸಂಸದ ಡಾ.ಉಮೇಶ ಜಾಧವ ಅವರು ಭಾನುವಾರ ಮೈಸೂರಿನಿಂದ ಬೆಂಗಳೂರಿಗೆ ದೌಡಾಯಿಸಿದರು. ಈ ಸಂಬಂಧ ಪರಪ್ಪನ ಅಗ್ರಹಾರದಲ್ಲಿ ಪೊಲೀಸರು ಪ್ರಕರಣ ದಾಖಲಾಗಿತ್ತು. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಕೊರೋನಾ ಸೋಂಕು ಪರೀಕ್ಷೆ ಮಾಡಿಸಬೇಕು ಎಂದು ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದರು. ಸಂಸದ ಡಾ.ಉಮೇಶ ಜಾಧವ ಅವರು ಪೊಲೀಸ್ ಠಾಣೆ ಮತ್ತು ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಹಾಗೂ ಮೃತ ವ್ಯಕ್ತಿಯ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಕೊರೋನಾ ಪರೀಕ್ಷೆ ನಡೆಸಲು ಅನುವು ಮಾಡಿಕೊಟ್ಟರು. ಸೋಮವಾರ ಸಾಯಂಕಾಲ ಮೃತ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದಿಲ್ಲ ಎಂದು ವೈದ್ಯಕೀಯ ವರದಿ ಬಂದಿತು.

ಅಷ್ಟರ ಹೊತ್ತಿಗೆ ಕುಟುಂಬ ಸದಸ್ಯರು ಬೆಂಗಳೂರಿಗೆ ಬಂದಿದ್ದರು. ಪತಿಯನ್ನು ಕಳೆದುಕೊಂಡ ಪತ್ನಿಯ ಗೋಳು ಹೇಳತೀರದಾಗಿತ್ತು. ಮೃತ ವ್ಯಕ್ತಿಯ ಪತ್ನಿ ಸೇರಿದಂತೆ ಸಂಬಂಧಿಕರನ್ನು ಸಂಸದ ಡಾ.ಉಮೇಶ ಜಾಧವ ಅವರು ಸಂತೈಸಿದರು. ಮೃತ ವ್ಯಕ್ತಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯ ಮುಖ್ಯಸ್ಥರಿಗೆ ಮೃತ ಕಾರ್ಮಿಕನಿಗೆ ಪಿ.ಎಫ್. ಸೇರಿದಂತೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಪೂರೈಸುವಂತೆ ಡಾ.ಉಮೇಶ ಜಾಧವ ಅವರು ಸೂಚನೆ ನೀಡಿದರು.

ಸಂಸದ ಡಾ.ಉಮೇಶ ಜಾಧವ ಅವರು ಮಂಗಳವಾರ ಬೆಂಗಳೂರಿನ ಆಸ್ಪತ್ರೆಯಿಂದ ಮಧ್ಯಾಹ್ನ ಮೃತದೇಹದೊಂದಿಗೆ ಕುಟುಂಬ ಸದಸ್ಯರನ್ನು ಅಂಬುಲೆನ್ಸ್ ವ್ಯವಸ್ಥೆ ಮಾಡಿ ಕೋಡ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಇತ್ತ ಮೃತ ಕಾರ್ಮಿಕನ ಸಹದ್ಯೋಗಿ ಕಾರ್ಮಿಕರು 25 ಸಾವಿರ ರೂ. ಮತ್ತು ಕಂಪನಿಯ ನೌಕರರು 30 ಸಾವಿರ ರೂ. ನೀಡುವ ಮೂಲಕ ನೊಂದ ಕುಟುಂಬಕ್ಕೆ ನೆರವಾದರು. ಮೃತದೇಹ ಮಂಗಳವಾರ ರಾತ್ರಿ ಸ್ವಗ್ರಾಮ ತಲುಪಲಿದೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here