ಕಲಬುರಗಿ: ಕೊರೋನಾ ವಿರುದ್ಧ ಯುದ್ಧ ಸಾರಿರುವ ಕಲಬುರಗಿ ಜಿಲ್ಲಾಡಳಿತ ಉತ್ತಮ ಆರೋಗ್ಯ ಚಿಕಿತ್ಸೆ ಪರಿಣಾಮ ಜಿಲ್ಲೆಯಲ್ಲಿ ಇದೀಗ ಕೊರೋನಾ ಪೀಡಿತರು ತೀವ್ರಗತಿಯಲ್ಲಿ ಗುಣಮುಖರಾಗುತ್ತಿದ್ದು, ರವಿವಾರ ಸಾಯಂಕಾಲದ ವರೆಗೆ ಜಿಲ್ಲೆಯಲ್ಲಿ ಸೋಂಕಿತ 1398 ರಲ್ಲಿ 1009 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಉಡುಪಿ ಬಿಟ್ಟರೆ ಕಲಬುರಗಿ 2ನೇ ಸ್ಥಾನ: ರಾಜ್ಯದಲ್ಲಿ ಸೋಂಕಿತರ ಪೈಕಿ ಗುಣಮುಖರಾದವರ ಸಂಖ್ಯೆ 1000 ಗಡಿ ದಾಟಿರುವುದನ್ನು ಅವಲೋಕಿಸಿದಾಗ ಉಡುಪಿ ಜಿಲ್ಲೆ 1179 ಸೋಂಕಿತರ ಪೈಕಿ 1042 ಗುಣಮುಖ (ಶೇ.88.37) ರೊಂದಿಗೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕಲಬುರಗಿ ಜಿಲ್ಲೆಯಲ್ಲಿ 1398 ಸೋಂಕಿತರ ಪೈಕಿ 1009 ರೋಗಿಗಳು ಗುಣಮುಖ (ಶೇ.72.17) ದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ 1398 ಕೊರೋನಾ ಪೀಡಿತರ ಪೈಕಿ 1009 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರಾದವರ ಪ್ರಮಾಣ ಶೇ.72.17 ಕ್ಕೆ ಏರಿಕೆಯಾಗಿದೆ. ಪ್ರಸ್ತುತ 371 ರೋಗಿಗಳು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪ್ರಮಾಣ ಶೇ.26.53. ಉಳಿದಂತೆ ಕೋವಿಡ್-19 ಸೋಂಕಿಗೆ 18 ಜನ ನಿಧನ ಹೊಂದಿದ್ದು, ಮರಣ ಪ್ರಮಾಣ ಶೇ.1 ರಷ್ಟಿದೆ. ಸೋಂಕಿಗೆ ಕೊನೆಯುಸಿರೆಳದ 18 ಜನರಲ್ಲಿ 60 ಮತ್ತು ಮೇಲ್ಪಟ್ಟ ವರ್ಷದ 8 ಜನ ಹಾಗೂ 55 ಮತ್ತು ಮೇಲ್ಪಟ್ಟ ವಯಸ್ಸಿನ 6 ಜನರಿದ್ದಾರೆ. ಮರಣ ಹೊಂದಿದ 18 ಜನರ ಪೈಕಿ ಬಹುತೇಕರು ಮಾರಣಾಂತಿಕ, ದೀರ್ಘಕಾಲದ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಐ.ಸಿ.ಯೂ.ನಲ್ಲಿ 10 ಜನ ಮಾತ್ರ: ಜಿಲ್ಲೆಯಲ್ಲಿ ಸಕ್ರಿಯ ಕೊರೋನಾ ಪೀಡಿತ 371 ರೋಗಿಗಳ ಪೈಕಿ ಇಂದಿನ ಸ್ಥಿತಿಯಲ್ಲಿ ಕೇವಲ 10 ಜನ ಮಾತ್ರ ಐ.ಸಿ.ಯೂ.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸೋಂಕಿನ ತೀವ್ರತೆ ಇಲ್ಲದಿರುವುದರಿಂದ ಸಾಮಾನ್ಯ ವಾರ್ಡ್‍ನಲ್ಲಿಯೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ ಪ್ರಸ್ತುತ ಜಿಲ್ಲೆಯಲ್ಲಿ ಯಾರೊಬ್ಬ ಕೋವಿಡ್-19 ರೋಗಿಯೂ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟಿನ ಅನುಷ್ಠಾನದ ಜೊತೆಗೆ ಪರಿಣಿತ ವೈದ್ಯರ ಸಲಹೆ ಮತ್ತು 24×7 ಟೆಲಿ ಐ.ಸಿ.ಯೂ. ಮೂಲಕ ತಜ್ಞ ವೈದ್ಯರ ಸೇವೆ ಬಳಸಿಕೊಂಡು ಇಲ್ಲಿನ ಜಿಮ್ಸ್ ಮತ್ತು ಇ.ಎಸ್.ಐ.ಸಿ. ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳು ಸತತ ಪರಿಶ್ರಮಪಟ್ಟು ದಿನದ 24 ಗಂಟೆ ರೋಗಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಪರಿಣಾಮ ಸೋಂಕಿತರು ತೀವ್ರಗತಿಯಲ್ಲಿ ಚೇತರಿಕೆ ಕಾಣುತ್ತಿರುವುದಕ್ಕೆ ಕಾರಣವಾಗಿದೆ ಎಂದು ಡಿ.ಸಿ. ಶರತ್ ಬಿ. ಅವರು ಅರೋಗ್ಯ ಸಿಬ್ಬಂದಿಯ ಸೇವೆಗಳನ್ನು ಕೊಂಡಾಡಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲೆಯ ಮಹಾಜನತೆ ಜಿಲ್ಲಾಡಳಿತ ಮತ್ತು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಡಿ.ಸಿ. ಶರತ್ ಬಿ. ಅವರು ಮನವಿ ಮಾಡಿದ್ದಾರೆ.