ಕಲಬುರಗಿ: ಸಿಮೆಂಟ್ ನಗರಿ ವಾಡಿ ಪಟ್ಟಣದ ಪ್ರವೇಶ ಪಡೆದಿರುವ ಮಹಾಮಾರಿ ಕೊರೊನಾ, ವಿವಿಧ ವ್ಯಾಪಾರಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಮುದಾಯಕ್ಕೆ ಹಬ್ಬಿರುವ ಸೂಚನೆ ರವಾನಿಸಿದೆ.
ಸ್ಥಳೀಯ ಐವರಲ್ಲಿ ಸೋಂಕು ದೃಢಪಟ್ಟ ಕುರಿತು ಆರೋಗ್ಯ ಇಲಾಖೆಯ ವರದಿ ಬಿತ್ತರವಾಗಿದ್ದು, ಎಲ್ಲೆಡೆ ಆತಂಕ ಮನೆಮಾಡಿದೆ.
ಪುರಸಭೆ ವ್ಯಾಪ್ತಿಯ ಬಸವನಕಣಿ ಬಡಾವಣೆಯ 24 ವರ್ಷದ ಮಹಿಳೆ, ಸೇವಾಲಾಲ ನಗರದ 14 ವರ್ಷದ ಬಾಲಕಿ, ಮಹಾತ್ಮಾ ಗಾಂಧಿ ವೃತ್ತದ 50 ವರ್ಷದ ವ್ಯಕ್ತಿ, ಬಿರ್ಲಾ ಏರಿಯಾದ 26 ಮತ್ತು 20 ವರ್ಷ ವಯಸ್ಸಿನ ಇಬ್ಬರು ಯುವಕರು ಸೇರಿದಂತೆ ಒಟ್ಟು ಐವರಲ್ಲಿ ಈ ಹೆಮ್ಮಾರಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ಓರ್ವ ತರಕಾರಿ ವ್ಯಾಪಾರಿ, ಓರ್ವ ಕಿರಾಣಿ ವ್ಯಾಪಾರಿ ಮತ್ತೊಬ್ಬ ಹೋಟಲ್ ವ್ಯಾಪಾರಿಯಾಗಿರುವುದೇ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಸಿಬ್ಬಂದಿಗಳು ಸೋಂಕಿತರೆಲ್ಲರನ್ನೂ ಶುಕ್ರವಾರ 108 ಆರೋಗ್ಯ ಸುರಕ್ಷಾ ಕವಚದ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
“ವಾಡಿ ನಗರದಲ್ಲಿ ಐವರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಮೂವರು ವ್ಯಾಪಾರಿಗಳಾಗಿದ್ದಾರೆ. ಹಾಗಂತ ಸೋಂಕಿತರ ಅಂಗಡಿಗಳ ಸುತ್ತಮುತ್ತ ಸೀಲ್ಡೌನ್ ಮಾಡುವುದಿಲ್ಲ. ಸೋಂಕಿತರ ಮನೆಗಳಷ್ಟೇ ಸೀಲ್ಡೌನ್ ನಿಯಮಕ್ಕೊಳಪಡುತ್ತವೆ. ಅಕ್ಕಪಕ್ಕದ ವ್ಯಾಪಾರಿಗಳು ಎಂದಿನಂತೆ ವ್ಯಾಪಾರ ವಹಿವಾಟು ಮುಂದುವರೆಸಲು ಅಡ್ಡಿಯಿಲ್ಲ. ವ್ಯಾಪಾರಿಗೆ ಸೋಂಕು ದೃಢಪಟ್ಟರೆ ಗ್ರಾಹಕರಿಗೆ ಸೋಂಕು ತಗುಲಿದೆ ಎಂದರ್ಥವಲ್ಲ. ಸೋಂಕಿತರ ಜತೆ ಒಂದು ಗಂಟೆಗೂ ಹೆಚ್ಚು ಸಮಯ ಕಳೆದಿದ್ದರೆ ಅಂತಹವರಿಗೆ ಸೋಂಕು ಹರಡುವ ಸಾಧ್ಯತೆಯಿರುತ್ತದೆ”.
-ಡಾ.ಸುರೇಶ ಮೇಕಿನ್. ತಾಲೂಕು ವೈದ್ಯಾಧಿಕಾರಿ, ಚಿತ್ತಾಪುರ.
ಸೋಂಕಿತರ ಕುಟುಂಬ ಸದಸ್ಯರನ್ನು ಸೇರಿದಂತೆ ಪುರಸಭೆಯ 60 ಜನ ಪೌರಕಾರ್ಮಿಕರು, 11 ಜನ ನೀರು ಸರಬರಾಜು ಸಿಬ್ಬಂದಿ ಹಾಗೂ 15 ಜನ ಕಚೇರಿ ಸಿಬ್ಬಂದಿಗಳನ್ನು ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ರ್ಯಾಂಡಂ ಟೆಸ್ಟ್ ನಡೆಸಲಾಗಿದೆ ಎಂದು ಪುರಸಭೆ ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕ ಶರಣಪ್ಪ ಮಡಿವಾಳ ತಿಳಿಸಿದ್ದಾರೆ.
ಸೋಂಕಿತರ ಮನೆ ಮತ್ತು ಬಡಾವಣೆಗಳಲ್ಲಿ ಪೌರಕಾರ್ಮಿಕರು ಸ್ಯಾನಿಟೈಸರ್ ಸಿಂಪರಣೆಗೆ ಮಾಡಿದ್ದಾರೆ. ಸೋಂಕು ದೃಢಪಟ್ಟ ಮೂವರು ವ್ಯಾಪಾರಿಗಳ ಅಂಗಡಿಗಳ ಸುತ್ತಮುತ್ತಲ ವ್ಯಾಪಾರ ವಹಿವಾಟು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿರುವ ಸಹ ವ್ಯಾಪಾರಿಗಳು, ಸಾಂಕ್ರಾಮಿಕ ರೋಗದ ಆತಂಕ ಎದುರಿಸುತ್ತಿದ್ದಾರೆ. ಮಹಾಮಾರಿ ಕೊರೊನಾ ಸೋಂಕು ಮಾರುಕಟ್ಟೆಗೂ ವ್ಯಾಪಿಸಿರುವುದು ಇಡೀ ಸಿಮೆಂಟ್ ನಗರಿಯನ್ನೆ ಬೆಚ್ಚಿಬೀಳಿಸಿದೆ. ಜನರು ದಿನಸಿ ಖರೀದಿಗಾಗಿ ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.