ಕಲಬುರಗಿ: ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ಜೂನ್ 30 ರಂದು ಹೊರಡಿಸಿರುವ ಅನ್ ಲಾಕ್ 2.0 ರ ಮಾರ್ಗಸೂಚಿಯಂತೆ ಕಲಬುರಗಿ ಜಿಲ್ಲೆಯಾದ್ಯಂತ ಜುಲೈ 5 ರಿಂದ ಆಗಸ್ಟ್ 2ರ ವರೆಗೆ ವರೆಗಿನ ಎಲ್ಲಾ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಇರಲಿದ್ದು, ಭಾನುವಾರದಂದು ಯಾರು ಅನಗತ್ಯ ರಸ್ತೆಗೆ ಇಳಿಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿರುತ್ತದೆ.
ಭಾನುವಾರದ ಲಾಕ್ ಡೌನ್ ಅಗತ್ಯ ಸೇವೆ ಮತ್ತು ಸರಕು ಸಾಗಣೆಗೆ ಅನ್ವಯವಾಗಲ್ಲ. ತುರ್ತು ಸೇವೆಗಳು ಎಂದಿನಂತೆ ಇರಲಿವೆ. ಇದನ್ನು ಹೊರತುಪಡಿಸಿ ಅನಗತ್ಯ ಸಾರ್ವಜನಿಕರ ಚಲವಲನವನ್ನು ನಿಷೇಧಿಸಲಾಗಿರುತ್ತದೆ.
ಭಾನುವಾರದಂದು ನಿಗದಿಯಾಗಿರುವ ಮದುವೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಕೋವಿಡ್-19 ಸೋಂಕು ತಗುಲದಂತೆ ಸರ್ಕಾರ ನಿರ್ದೇಶಿಸಿರುವ ಎಲ್ಲಾ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು ಮತ್ತು 50 ಜನ ಮೀರಿರಬಾರದು. ಇನ್ನು ಅಂತ್ಯಕ್ರಿಯೆಗೆ 20 ಕ್ಕಿಂತ ಹೆಚ್ಚಿನ ಜನ ಸೇರಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಇನ್ನೂ ಎಂದಿನಂತೆ ರಾತ್ರಿ 8 ರಿಂದ ಬೆಳಗಿನ 5 ಗಂಟೆ ವರೆಗೆ ಕರ್ಫ್ಯೂ ಇರಲಿದ್ದು, ಭಾನುವಾರ ಎಲ್ಲ ತರಹದ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಸಾರ್ವಜನಿಕರು ಭಾನುವಾರದ ಲಾಕ್ ಡೌನ್ ನಿಯಮ ಉಲ್ಲಂಘಿಸಿದಲ್ಲಿ ವಿಪತ್ತು ಕಾಯ್ದೆ 2005ರ ನಿಯಮ 51 ರಿಂದ 60 ಮತ್ತು ಐ.ಪಿ.ಸಿ. ಸೆಕ್ಷನ್ 188 ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.