ಕಲಬುರಗಿ: ರಾಜ್ಯ ವಕ್ಫ್ ಮಂಡಳಿ ಮುಖಾಂತರ ಕಲಬುರಗಿ ಜಿಲ್ಲೆಯ ಮಸೀದಿಗಳಲ್ಲಿ 10 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಪೇಶ್ ಇಮಾಮ್ ಹಾಗೂ ಮೌಜನ್ಗಳಿಗೆ ಸರ್ಕಾರವು ನಿವೃತ್ತಿ ವೇತನ ಯೋಜನೆ ಜಾರಿಗೊಳಿಸಿದೆ. ಇದಕ್ಕಾಗಿ ಜಿಲ್ಲೆಯ ಅರ್ಹ ಪೇಶ್ ಇಮಾಮ್ ಮತ್ತು ಮೌಜನ್ಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಯಸ್ಸು 65 ಹಾಗೂ ಇದಕ್ಕಿಂತ ಮೇಲ್ಪಟ್ಟಿರಬೇಕು. ಪೇಶ್ ಇಮಾಮ್ ಅಥವಾ ಮೌಜನ್ ಆಗಿ ನೋಂದಾಯಿತ ವಕ್ಫ್ ಸಂಸ್ಥೆಯಲ್ಲಿ / ಮಸೀದಿಯಲ್ಲಿ 10 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿರಬೇಕು. ಈಗಾಗಲೇ ಕೆಲಸ ನಿರ್ವಹಿಸುತ್ತಿದ್ದು ಸಹಾಯಧನ ಪಡೆಯುತ್ತಿರುವ ಇಮಾಮ್ / ಮೌಜನ್ ನಿವೃತ್ತಿ ವೇತನ ಪಡೆಯಲು ಅರ್ಹರಿರುವುದಿಲ್ಲ. ಅರ್ಜಿದಾರರ ವಾರ್ಷಿಕ ವರಮಾನ 1.20 ರೂ. ಲಕ್ಷಕ್ಕೆ ಮೀರಿರಬಾರದು.
ಆಧಾರ್ ಕಾರ್ಡ್ ನಕಲು ಪ್ರತಿ, ಅರ್ಜಿದಾರರ ಸೇವಾ ದೃಢೀಕರಣ ಪತ್ರ (ಮಸೀದಿಯ ಅಧ್ಯಕ್ಷರು/ ಕಾರ್ಯದರ್ಶಿಯವರಿಂದ), ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆದಾಯ ದೃಢೀಕರಣ ಪತ್ರ ಅಥವಾ ಬಿ.ಪಿ.ಎಲ್. ಕಾರ್ಡ ಪ್ರತಿ ಹಾಗೂ ವಿದ್ಯಾಭ್ಯಾಸದ ಬಗ್ಗೆ ದೃಢೀಕರಣ ಪತ್ರ (ಧಾರ್ಮಿಕ ಮತ್ತು ಲೌಕಿಕ) ದ್ವಿಪ್ರತಿಯಲ್ಲಿ ದಾಖಲಾತಿಗಳೊಂದಿಗೆ ಈ ಪತ್ರಿಕಾ ಪ್ರಕಟಗೊಂಡ 7 ದಿನದೊಳಗಾಗಿ ಕಲಬುರಗಿಯ ಮಿನಿ ವಿಧಾನಸೌಧ ಹತ್ತಿರದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮೊದಲನೆ ಮಹಡಿಯಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.