ಸರಕಾರದ ಎದೆ ತಟ್ಟಲಿ ಖಾಸಗಿ ಶಾಲಾ ಶಿಕ್ಷಕರ ಸಂಕಟ :ರಾಜ್ಯಮಟ್ಟದ ಆನ್‌ಲೈನ್ ಸಂವಾದ

1
91

ವಾಡಿ: ಕೋವಿಡ್ ಸಂಕಷ್ಟದಲ್ಲಿರುವ ರಾಜ್ಯದ ಖಾಸಗಿ ಶಾಲಾ ಶಿಕ್ಷಕರ ಗೋಳು ಸರಕಾರದ ಎದೆಯನ್ನ ಕಿವಿಯನ್ನ ತಟ್ಟುವ ರೀತಿಯಲ್ಲಿ ದನಿ ಎತ್ತಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಶಿಕ್ಷಣ ತಜ್ಞ, ಉಡುಪಿ ಟಿಎಂಎಫ್‌ಐ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಕರೆ ನೀಡಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ವತಿಯಿಂದ ಏರ್ಪಡಿಸಲಾಗಿದ್ದ ಸಂಕಷ್ಟದಲ್ಲಿ ಖಾಸಗಿ ಶಾಲಾ ಶಿಕ್ಷಕರು-ಪರಿಹಾರವೇನು? ಎಂಬ ರಾಜ್ಯಮಟ್ಟದ ಆನ್‌ಲೈನ್ ಸಂವಾದದಲ್ಲಿ ವಿಚಾರ ಮಂಡಿಸಿದ ಅವರು ಕೋವಿಡ್-೧೯ರ ಪರಿಹಾರ ಘೋಷಿಸುವಲ್ಲಿ ಸರಕಾರ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ತೆಳೆದಿರುವ ನಿರ್ಲಕ್ಷ್ಯ ಭಾವವನ್ನು ಖಂಡಿಸಿದರು. ಈ ದೇಶದಲ್ಲಿ ಶೋಷಕ ಕೇಂದ್ರತವಾದ ಅಸಮಾನತೆಯ ಶಿಕ್ಷಣ ವ್ಯವಸ್ಥೆ ಹಿಂದಿನಿಂದಲೂ ಜಾರಿಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಜಾರಿಯ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರ ಇನ್ನೂ ಅಸಮಾನವಾದ ಗುಣವನ್ನೇ ಕಾಪಾಡಿಕೊಂಡು ಹೋಗಲಾಗುತ್ತಿದೆ. ಲೆಕ್ಕವಿಲ್ಲದಷ್ಟು ಖಾಸಗಿ ಕಟ್ಟಡಗಳು ತಲೆ ಎತ್ತಿರುವುದರಿಂದ ನಿಮ್ಮ ಅಂಗಡಿಗಿಂತ ನಮ್ಮ ಅಂಗಡಿ ಚೆನ್ನಾಗಿದೆ ಬನ್ನಿ ಎಂಬಂತೆ ವ್ಯಾಪಾರ ಮನೋಭಾವದ ಗ್ರಾಹಕ ಆಕರ್ಷಣೀಯ ಕೇಂದ್ರಗಳನ್ನಾಗಿ ಖಾಸಗಿ ಶಾಲೆಗಳು ಪೋಷಕರ ಮುಂದೆ ನಿಂತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಶೈಕ್ಷಣಿಕ ಸೇವೆಯು ಅಸಮಾನತೆಯಿಂದ ಕೂಡಿದ್ದರಿಂದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರಲ್ಲಿ ಏಕರೂಪತೆ ಕಾಣುತ್ತಿಲ್ಲ. ಪರಸ್ಪರ ಹೋಲಿಕೆ ಮಾಡಲಾಗದ ವಿಭಿನ್ನ ರೀತಿಯ ಸರಕಾರಿ, ಖಾಸಗಿ, ಅನುದಾನಿತ, ಅನುದಾನರಹಿತ, ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮದ ಶಾಲೆಗಳ ಅತಿಥಿ ಶಿಕ್ಷಕರು, ಉಪನ್ಯಾಸಕರು, ತಾತ್ಕಾಲಿಕ ಶಿಕ್ಷಕರು ಸೇರಿದಂತೆ ಇತರ ಎಲ್ಲಾ ರೀತಿಯ ಹಣೆಪಟ್ಟಿಯ ಶಿಕ್ಷಕರ ಬದುಕು ಕಳೆದ ಐವತ್ತು ವರ್ಷಗಳಿಂದ ತೀವ್ರತರದ ಕಷ್ಟಗಳ ಗೋಳಾಟದಲ್ಲಿ ಸಾಗಿದೆ. ಇವರ ಕೂಗು ಯಾರ ಕಿವಿಗಳಿಗೂ ತಾಗುತ್ತಿಲ್ಲ. ವೇತನ, ಪಿಂಚಣಿ ಮತ್ತು ಉಪಾಧಾನ, ಭತ್ತೆಗಳಲ್ಲಾಗಲಿ ಏಕರೂಪತೆಯಿಲ್ಲ. ಉದ್ಯೋಗ ಭದ್ರತೆಯಿಲ್ಲ. ನಿವೃತ್ತಿ ವೇತನ ಇದ್ರೆ ಇತ್ತು ಇಲ್ಲದಿದ್ರೆ ಇಲ್ಲ ಎಂಬಂತಿದೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಕೇವಲ ೩೦೦೦ ರೂ. ಮಾಸಿಕ ವೇತನ ವಿತರಿಸುತ್ತವೆ. ಅನುದಾನಿತ ಶಿಕ್ಷಕರಿಗೆ ನೀಡುತ್ತಿರುವ ವೇತನವನ್ನೇ ಅನುದಾನ ರಹಿತ ಶಾಲಾ ಶಿಕ್ಷಕರಿಗೂ ನೀಡಬೇಕು ಎಂಬುದು ಶಿಕ್ಷಣ ಹಕ್ಕು ಕಾಯ್ದೆಯಲ್ಲಿದೆ.

ವಿಶ್ವವಿದ್ಯಾಲಯಗಳ ಕಡತಗಳಲ್ಲೂ ಇದೆ. ಆದರೆ ಈ ಎಲ್ಲಾ ಕಾನೂನಿನ ಕಾಗದಗಳು ಹಲ್ಲಿಲ್ಲದ ಹಾವಿನಂತಿವೆ. ತನ್ನ ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ವೇತನ ಕೊಡುತ್ತಿಲ್ಲ ಅನ್ನುವ ಕಾರಣಕ್ಕೆ ಆ ಖಾಸಗಿ ಶಾಲೆಯ ಅನುಮತಿಯಾಗಲಿ ಅನುದಾನವಾಗಲಿ ರದ್ದುಪಡಿಸಲಾದ ಉದಾಹರಣೆ ಈ ದೇಶದಲ್ಲಿಲ್ಲ ಎಂದು ಸರಕಾರಕ್ಕೆ ಚಾಟಿ ಬೀಸಿದ ಡಾ.ಮಹಾಬಲೇಶ್ವರ ರಾವ್, ಸದ್ಯ ಕೋವಿಡ್ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಶಿಕ್ಷಣ ಸಂಸ್ಥೆಗಳು ಮೂರು ತಿಂಗಳಿಂದ ವೇತನ ನೀಡಿಲ್ಲ. ಸರಕಾರವೂ ವಿಶೇಷ ಪ್ಯಾಕೇಜ್ ಘೋಷಿಸಿಲ್ಲ. ತಕ್ಷಣ ಸರಕಾರ ಖಾಸಗಿ ಶಿಕ್ಷಕರ ಬೇಡಿಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಫ್ರೊ.ಎ.ಅಜಿತ್ ಪ್ರಸಾದ್ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ವೇತನ ಸಮಸ್ಯೆ ತೀರಾ ಕೆಳಮಟ್ಟದಲ್ಲಿದ್ದು ಗಂಭೀರವಾಗಿದೆ. ಕೊಡುವ ಸಂಬಳವನ್ನೆ ಸರಿಯಾಗಿ ಕೊಡಲಿ ಎಂಬ ಮನೋಭಾವ ಶಿಕ್ಷಕರಲ್ಲಿದೆ. ರಜೆ ಸಂಬಳ ನೀಡದಿರುವುದು ಸೋಚನೀಯ. ವ್ಯಾಪಾರಿ ದೃಷ್ಠಿಕೋನದಿಂದ ಶಾಲಾ ಆಡಳಿತ ಮಂಡಳಿಗಳು ಹೊರಬಂದಾಗ ಮಾತ್ರ ಇದಕ್ಕೆ ಪರಿಹಾರ ಸಿಗಲಿದೆ. ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಸದಸ್ಯರು ಮನಸ್ಸು ಮಾಡಿದರೆ ಬದಲಾವಣೆ ತರಬಹುದು. ಈ ನಡುವೆ ಹೋರಾಟವೊಂದೇ ಶಿಕ್ಷಕರ ಎದುರಿಗಿರುವ ಏಕೈಕ ಮಾರ್ಗ ಎಂದರು.

ಕೊಪ್ಪಳದ ಶಿಕ್ಷಕ ಮಹೇಶ ಬಳ್ಳಾರಿ ವಿಚಾರ ಮಂಡಿಸಿದರು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಸೆಕ್ರೇಟರಿಯಟ್ ಸದಸ್ಯ ವೀರಭದ್ರಪ್ಪ ಆರ್.ಕೆ ಸಂವಾದ ನಿರೂಪಿಸಿದರು. ರಾಜ್ಯದ ಅನೇಕ ಖಾಸಗಿ ಶಾಲೆಗಳ ಶಿಕ್ಷಕರು, ಹಲವು ಪ್ರಶ್ನೆಗಳನ್ನು ಸವಾಲುಗಳನ್ನು ತಜ್ಞರ ಮುಂದಿಟ್ಟು ಚರ್ಚೆಯಲ್ಲಿ ಭಾಗವಹಿಸಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here