ಆಳಂದ: ತಾಲೂಕಿನ ಎಲ್ಲ ಮೂಲೆ ಮೂಲೆಗೂ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಬುಧುವಾರ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಪಿಎಂಜಿಎಸ್‍ವೈ ಯೋಜನೆಯ ಅಡಿಯಲ್ಲಿ 6 ಕೋಟಿ ರೂ ವೆಚ್ಚದ 8 ಕೀ.ಮಿ ಉದ್ದದ ಲಾಡಚಿಂಚೋಳಿ-ಧರ್ಮವಾಡಿ ವಾಯಾ ಕಡಗಂಚಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಜನರು ನನ್ನ ಮೇಲೆ ಭರವಸೆಯನ್ನಿಟ್ಟು 4ನೇ ಬಾರಿಗೆ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ ಅವರ ನಿರೀಕ್ಷೆಗೆ ತಕ್ಕಂತೆ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳುತ್ತಿದ್ದೇನೆ ಜನತೆಯ ಸಹಕಾರವು ಮುಖ್ಯವಾಗಿದೆ ಎಂದರು.
ಕೊರೋನಾ ಸಂಕಷ್ಟದ ಕಾಲದಲ್ಲಿಯೂ ಸರ್ಕಾರ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡುತ್ತಿದೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ತಾಲೂಕಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ನೂರಾರು ಕಾಮಗಾರಿಗಳು ಪ್ರಗತಿಯಲ್ಲಿವೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅವುಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ಕಡಗಂಚಿ, ಸುಂಟನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಅತೀ ಹೆಚ್ಚಿನ ಅನುದಾನ ಮಂಜೂರಿ ಮಾಡಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯರು, ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಮುಖಂಡರಾದ ವೀರಣ್ಣ ಮಂಗಾಣೆ, ರಾಜಶೇಖರ ಮಲಶೆಟ್ಟಿ, ಪ್ರಭುಲಿಂಗ ಹುಲಿ, ಚಂದ್ರಕಾಂತ ಮಂಗಾಣೆ, ಶಿವಾನಂದ ಪಾಟೀಲ, ಅಣ್ಣಾರಾಯ ಪಾಟೀಲ, ಶಂಕರರಾವ ಪಾಟೀಲ, ಮಲ್ಲಿಕಾರ್ಜುನ ತಡಕಲ, ವಿಶ್ವನಾಥ ತಡಕಲ, ರಾಜಕುಮಾರ ಪಾಟೀಲ, ಶಾಂತಪ್ಪ ಸವಳಸಿ, ಮಲ್ಲಿಕಾರ್ಜುನ ಪಾಟೀಲ, ಭೀಮಶಂಕರ ಪಟ್ಟಣ, ಮಹಿಬೂಬ್ ಆಳಂದ ಶ್ರೀಶೈಲ ಪಾಟೀಲ ಸೇರಿದಂತೆ ಲಾಡಚಿಂಚೋಳಿ, ಕಡಗಂಚಿ, ಧರ್ಮವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.