ರಾಯಚೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಟಿಪ್ಪು ಸುಲ್ತಾನ್ ಇಂತಹ ಸ್ವಾತಂತ್ರ್ಯ ಹೋರಾಟಗಾರರನ್ನ ಇತಿಹಾಸದ ಪಠ್ಯದಿಂದ ಅಳಿಸಿ, ಸರ್ಕಾರ ವಿದ್ಯಾರ್ಥಿ ಯುವ ಜನತೆಯ ಹಾದಿ ತಪ್ಪಿಸುತ್ತಿರುವುದು ಭಾರತ ವಿಧ್ಯಾರ್ಥಿ ಫೆಡರೇಶನ್ SFI ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ತಿಳಿಸುತ್ತಾರೆ.
ಬಿಜೆಪಿ ಹಾಗೂ ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟಗಾರರ ನಿಜವಾದ ಇತಿಹಾಸದ ಬಗ್ಗೆ ಜನರಿಗೆ ತಿಳಿಸುತ್ತಿಲ್ಲ. ದೇಶಪ್ರೇಮಿ ರಾಯಣ್ಣ, ಟಿಪ್ಪು ಸುಲ್ತಾನ್ ಹಾಗೂ ರಾಣಿ ಅಬ್ಬಕ್ಕ ಇವರ ಬಗ್ಗೆ ಇರುವ ಇತಿಹಾಸವನ್ನು ಪಠ್ಯದಿಂದ ಅಳಿಸಿ ಹಾಕುವ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹೊರಟಿರುವುದು ಖಂಡನೀಯವಾಗಿದೆ. ಸ್ವಾತಂತ್ರಕ್ಕಾಗಿ ಟಿಪ್ಪು ಸುಲ್ತಾನ್ ಅವರು ಪಟ್ಟ ಕಷ್ಟದ ಹೋರಾಟವನ್ನು ನಾಶಪಡಿಸುತ್ತಿರುವುದು ದುರ್ದೈವ ಸಂಗತಿಯಾಗಿದೆ. ಬಸವಣ್ಣ, ರಾಮಾನುಜಾಚಾರ್ಯ, ಶಂಕರಾಚಾರ್ಯ, ಮಧ್ಯ್ವಾಚಾರ್ಯರರ ಒಂದು ಪಠ್ಯ ಭಾಗಕ್ಕೆ ಕತ್ತರಿ ಹಾಕಲಾಗಿದೆ. ಸಂವಿಧಾನಾತ್ಮಕ ಸಂಗತಿಗಳ ಜೊತೆಗೆ ತುಳುನಾಡು, ಹೈದರಾಬಾದ್, ಕರ್ನಾಟಕ ವಿಮೋಚನಾ ಚಳುವಳಿಯಂತಹ ಪ್ರಾದೇಶಿಕ ಮಹತ್ವದ ವಿಷಯಗಳನ್ನು ಕಡಿತಗೊಳಿಸಿರುವುದು ವಿವೇಚನಾ ರಹಿತ ಕ್ರಮವಾಗಿದೆ.
ಕೊರೊನಾ ಸಮಯದಲ್ಲಿ ಬಿಜೆಪಿ ಸರ್ಕಾರ ಪರಿಸ್ಥಿತಿಯ ದುರ್ಲಾಭ ಪಡೆದು ಇಂತಹ ಕೆಲಸ ಮಾಡಿರುವುದು ಸರಿಯಲ್ಲ. ಟಿಪ್ಪು ಓರ್ವ ದೇಶಭಕ್ತ. ಅವರಿಗೆ ಗೌರವ ನೀಡುವುದು ವಿದ್ಯಾರ್ಥಿ ಯುವಜನತೆಯ ಕರ್ತವ್ಯ. ಬಿಜೆಪಿ ಪಠ್ಯಪುಸ್ತಕದಿಂದ ಟಿಪ್ಪು ವಿಚಾರ ಮಾತ್ರವಲ್ಲ ಸಂಗೊಳ್ಳಿ ರಾಯಣ್ಣ, ದಲಿತ ಚಳುವಳಿ ಕರ್ನಾಟಕ ವಿಮೋಚನಾ ಚಳುವಳಿ, ಪಂಚಾಯತಿ ರಾಜ್ ಕಾಯ್ದೆ೧೯೯೩ ಉಳಿಗಮಾನ್ಯ ಪದ್ದತಿ, ಕ್ರೈಸ್ತಧರ್ಮ & ಇಸ್ಲಾಂ ಧರ್ಮದ ಭೋದನೆಗಳು ಹಾಗೂ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ಮುಂತಾದ ವಿಷಯಗಳನ್ನು ಒಳಗೊಂಡ ಪಠ್ಯವನ್ನು ಕಡಿತ ಮಾಡುತ್ತಿದೆ. ಕೂಡಲೇ ರಾಜ್ಯ ಬಿಜೆಪಿ ಸರ್ಕಾರ ಈ ನಿರ್ಧಾರವನ್ನು ಕೈ ಬಿಟ್ಟು ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಪರಿಹರಿಸುವಲ್ಲಿ ಹೆಚ್ಚಿನ ಗಮನ ನೀಡಬೇಕೆಂದು ಸಮಿತಿಯು ಸರ್ಕಾರಕ್ಕೆ ಒತ್ತಾಯಿಸಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.