ಕಲಬುರಗಿ: ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಬಳಿ ಮಕ್ಕಳ ಉದ್ಯಾನವನ ಹಾಗೂ ಕಿರು ಮೃಗಾಲಯ ಸ್ಥಾಪಿಸಲು ಅರಣ್ಯ ಇಲಾಖೆಗೆ 42.38 ಎಕರೆ ವಿಸ್ತೀರ್ಣದ ಜಮೀನು ಹಸ್ತಾಂತರಿಸಲು ಸರ್ಕಾರ ಕೈಗೊಂಡಿದ್ದ ಕ್ರಮಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಮಂಜೂರಾತಿ ನೀಡಿದೆ.
ಪ್ರಸ್ತುತ ಕಲಬುರಗಿ ನಗರದಲ್ಲಿ 6.33 ವಿಸ್ತೀರ್ಣದ ಕಿರಿದಾದ ಸ್ಥಳದಲ್ಲಿ ಮೃಗಾಲಯವನ್ನು ರೂಪಿಸಲಾಗಿದ್ದು, ಈ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಿದೆ. ಈ ದೃಷ್ಟಿಯಿಂದ ವಿಶಾಲ ಸ್ಥಳದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಮೃಗಾಲಯ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಮಾಡಬೂಳ ಬಳಿ 42.38 ಎಕರೆ ಗೈರಾಣಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರೂ ಆದ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಉದ್ದೇಶಿತ ಪ್ರಾಣಿ ಸಂಗ್ರಹಾಲಯ ಈ ಭಾಗದ ಪ್ರಮುಖ ಪ್ರವಾಸಿ ತಾಣವಾಗಲಿದೆ ಎಂದೂ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.