ಶರಣರ ಸ್ಮಾರಕ: ಶರಣ ಆದಯ್ಯ

0
72

ಬಸವಣ್ಣನವರ ತತ್ವಗಳನ್ನು ಒಪ್ಪಿಕೊಂಡು ಅವರ ಹಿಂದೆ ಗುರುಗಳು, ವಿದ್ವಾಂಸರು, ತತ್ವಜ್ಞಾನಿಗಳು ಬಂದರು. ಇವರು ಶೈವ ಸಂಪ್ರದಾಯಕ್ಕೆ ಸೇರಿದವರಾಗಿದ್ದರು ಅಲ್ಲಮಪ್ರಭು, ರೇವಣಸಿದ್ಧ ಆದಯ್ಯ, ಹೊನ್ನಯ್ಯ, ಏಕಾಂತರಾಮಯ್ಯ ಮುಂತದವರು ಸಾಕ್ಷಿಯಾಗಿದ್ದಾರೆ. ಏಕಾಂತ ರಾಮಯ್ಯ ಮತ್ತು ಆದಯ್ಯ ಉಗ್ರಭಕ್ತಿ ಉಳ್ಳ ಸೋಮನಾಥನ ಭಕ್ತರು. ಹೀಗಾಗಿ ವೀರಸೋಮೇಶ್ವರ ಎಂದು ಅವರು ಸಂಭೋಧನೆ ಮಾಡಿರುವುದನ್ನು ಗುರುತಿಸಬಹುದಾಗಿದೆ.

ಶಿವ ಸಂಪ್ರದಾಯವನ್ನು ಪ್ರಚಾರ ಮಾಡಲು ತಿರುಗಾಡುತ್ತಿದ್ದಾಗ ಇವರು ಮತ್ತು ಇತರ ಧರ್ಮದವರ ಜೊತೆ ಒಂದೊಂದು ಸಲ ಸಂಘರ್ಷಕ್ಕೆ ಇಳಿದಿರುವುದನ್ನು ನಾವು ಕಾಣುತ್ತೇವೆ. ಆದರೆ ಇವರೆಲ್ಲರೂ ಬಸವಣ್ಣನವರ ಕೀರ್ತಿ ಕೇಳಿ ಕಲ್ಯಾಣಕ್ಕೆ ಬಂದು ತಮ್ಮ ಉಗ್ರತೆ ಕಳೆದುಕೊಂಡರು ಎಂಬುದು ಸತ್ಯದ ಮಾತು. ಶರಣ ಆದಯ್ಯನವರು ಸೌರಾಷ್ಟ್ರದಿಂದ ಲಕ್ಷ್ಮೇಶ್ವರ, ಸಾಸಲೂರಿಗೆ ಬಂದು ಸೋಮನಾಥ ದೇವಾಲಯ ಕಟ್ಟಿದಂತೆ ಏಕಾಂತ ರಾಮಯ್ಯ ಆಳಂದನಿಂದ ಹೊರಟು ಲಕ್ಷ್ಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಬ್ಬಲೂರಿನಲ್ಲಿ ಸೋಮೇಶ್ವರ ದೇವಾಲಯ ಕಟ್ಟಿದರು ಎಂಬ ಮಾಹಿತಿ ದೊರೆಯುತ್ತದೆ. ಆದಯ್ಯನವರು ಬಹುಶಃ ಶರಣ ರೇವಣಸಿದ್ಧರ ಸಮಕಾಲೀನರಾಗಿರಬಹುದು ಎಂದು ಅಂದಾಜಿಸಬಹುದಾಗಿದೆ.

Contact Your\'s Advertisement; 9902492681

ಶರಣ ಆದಯ್ಯನವರು ವ್ಯಾಪಾರಕ್ಕಾಗಿ ಪುಲಿಗೆರೆ (ಲಕ್ಷ್ಮೇಶ್ವರ) ಗೆ ಬಂದವರು. ಜೈನಧರ್ಮಕ್ಕೆ ಸೇರಿದ ಪದ್ಮಾವತಿಯನ್ನು ಮದುವೆಯಾಗುತ್ತಾರೆ. ಒಂದು ದಿನ ಶರಣರಿಗಾಗಿ ತಯಾರಿಸಿದ್ದ ಪ್ರಸಾದವನ್ನು ಅವರ ಮಾವ ಜೈನಮುನಿಗಳಿಗೆ ಬಡಿಸಿದ್ದರು. ಊಟ ಮಾಡದೆ ಕುಳಿತಿರುವಾಗ ಪದ್ಮಾವತಿಯ ತಂದೆಯವರು, ಈ ಬಸದಿಯಲ್ಲಿ ಈಶ್ವರನನ್ನು ಸ್ಥಾಪಿಸಿಯೇ ಊಟ ಮಾಡಬೇಕು ಎಂದುಕೊಂಡಿರುವೆಯಾ? ಎಂದು ಛೇಡಿಸಿರುವುದನ್ನೇ ಸವಾಲಗಿ ಸ್ವೀಕರಿಸಿ ಶಿವನನ್ನೇ ಅಲ್ಲಿಗೆ ಕರೆತಂದ ಶಿವನನ್ನು ಪ್ರತಿಷ್ಠಾಪಿಸಿದ ನಿಷ್ಠಾವಂತ ಭಕ್ತ ಎಂಬಿತ್ಯಾದಿ ಸಂಗತಿಗಳು ಹರಿಹರ, ರಾಘವಾಂಕ ಮತ್ತು ಪುರಾಣಗಳಿಂದ ತಿಳಿದು ಬರುತ್ತದೆ.

ಕಾವ್ಯ ಪುರಾಣಗಳ ಕಥೆಗೆ ಪೂರಕವಾದ ಮುತ್ತುರತ್ನ ವ್ಯಾಪಾರ ಮಾಡಲಾಗುತ್ತಿದ್ದ ವಿಶಾಲ ಮಾರುಕಟ್ಟೆ ಸ್ಥಳ, ಅಲ್ಲಿಗೆ ಬಂದಾಗ ಆದಯ್ಯ ತಂಗಿದ್ದ ಹೋಜೇಶ್ವರ ದೇವಾಲಯ, ಪದ್ಮಾವತಿಯನ್ನು ಮದುವೆಯಾದ ಸ್ಥಳ ಎಂದು ಹೇಳಲಾಗುವ ಸುರಗಿಮಠ, ಆದಯ್ಯನ ಮನೆಗೆ ಪ್ರಸಾದಕ್ಕೆ ಬರುವುದಕ್ಕಿಂತ ಮುಂಚೆ ಸನ್ಯಾಸಿಗಳು ತಂಗಿದ್ದ ಓಲಿಮಠ, ಸೋಮನಾಥ ದೇವಾಲಯ, ಗರ್ಭಗುಡಿಯ ಬಲಗಡೆ ಆದಯ್ಯನ ಮತ್ತು ಪದ್ಮಾವತಿಯರ ಶಿಲ್ಪ ಮೂರ್ತಿಗಳನ್ನು ಈಗಲೂ ಅಲ್ಲಿ ಕಾಣಬಹುದು.

ಸೋಮನಾಥ ದೇವಾಲಯದಲ್ಲಿ ಕಲಾತ್ಮಕ ಕಂಬ ಮಂಟಪಗಳು, ನಂದಿ ಮೇಲೆ ಶಿವ-ಪಾರ್ವತಿ ಕುಳಿತ ಅಪರೂಪದ ವಿಗ್ರಹ ಇದೆ. ದೇವಸ್ಥಾನದ ಗೋಡೆಯ ಮೇಲೆ ಕೂಡ ಇದೇ ಬಗೆಯ ಉಬ್ಬು ಶಿಲ್ಪ ಇರುವುದನ್ನು ಕಾಣಬಹುದು. ಕಲಬುರಗಿಯ ಕೋಟೆಯೊಳಗೆ, ಜೇವರ್ಗಿ ತಾಲ್ಲೂಕಿನ ಜಾಡಕೊಂಡಗುಳಿಯಲ್ಲಿ ಕೇಶಿರಾಜ ಕಟ್ಟಿದ ಸೋಮೇಶ್ವರ ದೇವಾಲಯದಲ್ಲೂ ಇಂತಹ ವಿಗ್ರಹದ ಜೊತೆಗೆ ಯಕ್ಷಿಯ ಮೇಲೆ, ವರಹಾದ ಮೇಲೆ, ಆನೆಯ ಮೇಲೆ ಕುಳಿತ ಶಿವ-ಪಾರ್ವತಿಯ ಶಿಲ್ಪ ವಿಗ್ರಹಗಳಿವೆ.

೧೧೦೨ರಲ್ಲಿ ದೊರೆತ ಶಾಸನದಲ್ಲಿ ೬ನೇ ವಿಕ್ರಮಾದಿತ್ಯನ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿರುವುದರ ಬಗ್ಗೆ ಉಲ್ಲೇಖವಿದೆ. ಚಾಲೂಕ್ಯರ ವಾಸ್ತು ಲಾಂಛನದ ಚಿಹ್ನೆ ಇದೆ. ಹಾಳಾಗಿದ್ದ ಈ ದೇವಾಲಯವನ್ನು ಇನ್ಫೋಸಿಸ್‌ನ ಸುಧಾಮೂರ್ತಿಯವರು ೪ ಕೋಟಿ ರೂ. ವೆಚ್ಚದಲ್ಲಿ ತೀರಾ ಇತ್ತೀಚಿಗೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.

ಹುಣ್ಣಿಮೆಯ ದಿನ ತೇರು ಎಳೆಯುತ್ತಾರೆ. ಹುಣ್ಣಿಮೆಯ ಹಿಂದಿನ ದಿನ ಲಿಂಗಾಯತರ ಸುಪರ್ದಿಯಲ್ಲಿರುತ್ತದೆ. ಮರುದಿನದಿಂದ ಬ್ರಾಹ್ಮಣರು ದೇವಾಲಯದ ಪೂಜೆ ನೆರವೇರಿಸುವ ಸಂಪ್ರದಾಯ ಈಗಲೂ ಅಲ್ಲಿ ಕಂಡು ಬರುತ್ತಿದ್ದು, ಆ ಊರಲ್ಲಿ ಆದಯ್ಯನ ದೇವಸ್ಥಾನ, ಅವರ ಹೆಸರಲ್ಲಿ ಒಂದು ವೃತ್ತ ಇರುವುದನ್ನು ಗುರುತಿಸಬಹುದು. ಲಕ್ಷ್ಮೇಶ್ವರದಿಂದ ಉತ್ತರಕ್ಕೆ ನಾಲ್ಕು ಕಿ. ಮೀ. ದೂರದಲ್ಲಿ ಬರುವ ಶೆಟ್ಟಿಹಳ್ಳಿಯುಲ್ಲಿ ಆದಯ್ಯ ಕಟ್ಟಿಸಿದನು ಎನ್ನಲಾಗುವ ಕೆರೆ ಇದೆ. ಸಾಸಲು ಗ್ರಾಮದಲ್ಲಿ ಆದಯ್ಯ ಕಟ್ಟಿಸಿದ ಸೋಮೇಶ್ವರ ದೇವಾಲಯ, ಆದಿಶೆಟ್ಟಿ, ಕೋರಿಶೆಟ್ಟಿಯ ಶಿಲ್ಪ, ವಿಷದ ಕೊಳ, ಭೈರವರಾಜ ಮಠ, ಕುದುರೆ ಮಂಡಮ್ಮ ದೇವಲಯ, ಊರ ಹೊರೆಗೆ ಶಂಭುಲಿಂಗೇಶ್ವರ ದೇವಾಲಯ ಇದೆ ಇವೆರಡೂ ಆದಯಯ್ಯನವರು ಕಟ್ಟಿಸಿರಬೇಕು ಎಂದು ಹೇಳಲಾಗುತ್ತಿದೆ.

ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here