ವಾಡಿ: ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಭಗತ್‌ಸಿಂಗ್‌ನಂತಹ ಕ್ರಾಂತಿಕಾರಿಗಳು ಪ್ರಾಣತ್ಯಾಗ ಮಾಡಿ ಹುತಾತ್ಮರಾದರೆ, ಸಂಘರ್ಷದಲ್ಲಿ ಜೈಲು ಸೇರಿದ್ದ ಸಾವರ್ಕರ್‌ನಂತಹ ಕೆಲ ಹೇಡಿ ನಾಯಕರು ಬ್ರಿಟೀಷರಿಗೆ ಶರಣಾಗತರಾಗುವ ಮೂಲಕ ಬಂಧಮುಕ್ತರಾಗಿ ಇಡೀ ಚಳುವಳಿಗೆ ದ್ರೋಹ ಬಗೆದರು.
ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದ ಅಂದಿನ ಕಾಂಗ್ರೆಸ್ ಎಂಬ ಒಕ್ಕೂಟ, ಸ್ವಾತಂತ್ರ್ಯ ನಂತರ ರಾಜಕೀಯ ಪಕ್ಷವಾಗಿ ಮುಂದು ವರೆಯುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಆಶಯಕ್ಕೆ ಮಸಿಬಳಿದರು. ಸಂಧಾನತೀತ ಪಂಥ ಹಾಗೂ ಸಂಧಾನಪರ ಪಂಥ ಎಂಬ ಗುಂಪುಗಳಾಗಿ ಗುರಿ ಒಂದೆಯಾದರೂ ಹೋಗುವ ದಾರಿ ಬೇರೆಬೇರೆಯಾಯಿತು. ಇದು ಬ್ರಿಟೀಷರಿಗೆ ಬಳುವಳಿಯಾಯಿತು. ಸ್ವಾತಂತ್ರ್ಯ ಭಾರತದಲ್ಲೂ ಸಹ ನಾವಿಂದು ಬಡತನ, ಹಸಿವು, ನಿರುದ್ಯೋಗ, ಭ್ರಷ್ಟಾಚಾರ, ಕಂಧಾಚಾರ, ಸರ್ವಾಧಿಕಾರದ ಆಡಳಿತ, ಶೋಷಕರ ಅಟ್ಟಹಾಸ ಹೀಗೆ ಹಲವು ಬಗೆಯ ಶೋಷಣೆಗೆ ಒಳಗಾಗಿದ್ದೇವೆ. ಸ್ವಾತಂತ್ರ್ಯ ಹೋರಾಟದ ರಾಜಿರಹಿತ ಹೋರಾಟದ ನೇತಾರರು ನಮಗೆ ಆದರ್ಶ, ಎಂಬಿತ್ಯಾದಿ ಪ್ರಶ್ನೆಗಳು ಮತ್ತು ಸಲಹೆಗಳು ಸಭಿಕರಿಂದ ತೂರಿಬಂದು ಅರ್ಥಪೂರ್ಣ ಚರ್ಚೆ ನಡೆಯಿತು.
ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ವತಿಯಿಂದ ವಾಡಿ ನಗರದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನಾಡಿನ ಹಿರಿಯ ಸಾಹಿತಿ ದಿ.ಬಸವರಾಜ ಕಟ್ಟಿಮನಿ ಅವರ ಮಾಡಿ ಮಡಿದವರು ಎಂಬ ರಾಜ್ಯ ಪ್ರಶಸ್ತಿ ಪಡೆದ ಕಾದಂಬರಿ ಕುರಿತು ಯುವ ಬರಹಗಾರ ವೀರಣ್ಣ ಯಾರಿ ಅವರು ನಡೆಸಿಕೊಟ್ಟ ಓದು-ಸಂವಾದ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸ್ವಾತಂತ್ರ್ಯ ಚಳುವಳಿಯ ದಿಕ್ಕು ದೆಸೆಯ ಕುರಿತು ಆರೋಗ್ಯಕರ ಸಂವಾದ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಡಿಎವಿ ಶಾಲೆಯ ಕನ್ನಡ ಶಿಕ್ಷಕ ಎನ್.ಗೋಪಾಲಕೃಷ್ಣ, ಜಗತ್ತಿನ ಜ್ಞಾನದ ಮೂಲ ಪುಸ್ತಕವಾಗಿದೆ. ಇಂದಿನ ತಾಂತ್ರಿಕ ಯುಗದ ಒತ್ತಡಕ್ಕೆ ಸಿಲುಕಿದ ನಾವುಗಳು ಪುಸ್ತಕಗಳನ್ನು ಓದುವುದೇ ಮರೆತು ಬಿಟ್ಟಿದ್ದೇವೆ. ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸುತ್ತವೆ. ಪ್ರಗತಿಶೀಲ ಬರಹಗಾರರ ಸಾಹಿತ್ಯ ಓದಗರ ಸಂಖ್ಯೆ ಹೆಚ್ಚಾಗಬೇಕು. ಜ್ಞಾನದ ಹರಿವು ಹೆಚ್ಚಿಸಿಕೊಳ್ಳಲು ಪುಸ್ತಕ ಸಂಗಾತಿಯಾಗಬೇಕು ಎಂದರು.
ಎಸಿಸಿ ಸಹ ವ್ಯವಸ್ಥಾಪಕ ಲಕ್ಷ್ಮೀಕಾಂತ ಬಿರಾದಾರ ಅತಿಥಿಗಳಾಗಿದ್ದರು. ಸಂಚಲನ ವೇದಿಕೆ ಅಧ್ಯಕ್ಷ ವಿಕ್ರಮ ನಿಂಬರ್ಗಾ ಅಧ್ಯಕ್ಷತೆ ವಹಿಸಿದ್ದರು. ಸಿದ್ದಯ್ಯಶಾಸ್ತ್ರೀ ನಂದೂರಮಠ, ವಿ.ಕೆ.ಕೆದಿಲಾಯ, ಮಹಾನಂದಾ ನೀಲೂರೆ, ಗೌರಮ್ಮ ಮುಡುಬೂಳಕರ, ಮಲ್ಲೇಶ ನಾಟೀಕಾರ, ಶ್ರವಣಕುಮಾರ ಮೌಸಲಗಿ, ಭೀಮಶಾ ಜಿರೊಳ್ಳಿ, ದೇವಿಂದ್ರ ಕರದಳ್ಳಿ, ಕಾಶಿನಾಥ ಶೆಟಗಾರ, ಖೇಮಲಿಂಗ ಬೆಳಮಗಿ, ಸೂರ್ಯಕಾಂತ ರದ್ದೇವಾಡಿ, ಸುನೀಲ ರಾಠೋಡ, ಶ್ರೀಶರಣ ಹೊಸಮನಿ, ಗುಂಡಪ್ಪ ಭಂಕೂರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ರವಿ ಕೋಳಕೂರ ಸ್ವಾಗತಿಸಿದರು. ದಯಾನಂದ ಕರ್ಜಗಿ ನಿರೂಪಿಸಿದರು. ಮಲಿಕ್‌ಪಾಶಾ ಮೌಜನ್ ವಂದಿಸಿದರು.