ಕಲಬುರಗಿ: ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ರಾತ್ರಿ ವೇಳೆ ನಿಲ್ಲಿಸಲಾಗುತ್ತಿದ್ದ ಲಾರಿಗಳಿಂದ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದ ನಾಲ್ವರು ಕಳ್ಳರನ್ನು ವಾಡಿ ಪೊಲೀಸರು ಬಂಧಿಸಿದ್ದಾರೆ.
ಶಹಾಬಾದ ನಗರದ ನಿವಾಸಿಗಳಾದ ವಂದನಾ ಸಲೀಂ ಶೇಖ (20), ಲಕ್ಷ್ಮೀ ಅನೀಲ ಕಾಂಬಳೆ (25), ಗೌಸ್ ಅಬ್ದುಲ್ ರಹೀಮ ಬಂಗಡಿವಾಲೆ (19) ಹಾಗೂ ದೇವರಾಜ ಈರಣ್ಣ ಮಾವನೂರ (22) ಬಂಧಿತ ಆರೋಪಿಗಳಾಗಿದ್ದಾರೆ. ಆ.9 ರಂದು ರಾತ್ರಿ ಪಟ್ಟಣದ ಲಕ್ಷ್ಮೀಪುರವಾಡಿ ಸಮೀಪದ ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಿಸಲಾಗಿದ್ದ ಮೂರು ಲಾರಿಗಳಿಂದ ಒಟ್ಟು ಆರು ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿದ್ದು, ಆ.10 ರಂದು ಸ್ಥಳೀಯ ಬಿರ್ಲಾ ಏರಿಯಾದ ಶೇಖ ಮಹೆಬೂಬ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕ್ರೈಂ ಪಿಎಸ್‍ಐ ದಿವ್ಯಾ ಹಾಗೂ ಪಿಎಸ್‍ಐ ವಿಜಯಕುಮಾರ ಭಾವಗಿ, ಪೇದೆಗಳಾದ ಲಕ್ಷ್ಮಣ, ದತ್ತಾತ್ರೇಯ, ಬಸವರಾಜ, ಹುಸೇನ ಪಾಶಾ ಅವರು ಶಹಾಬಾದ ಡಿವೈಎಸ್‍ಪಿ ವೆಂಕನಗೌಡ ಪಾಟೀಲ, ಸಿಪಿಐ ಕೃಷ್ಣಪ್ಪ ಕಲ್ಲದೇವರು ಅವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ್ದರು.
ಘಟನಾ ಸ್ಥಳದಲ್ಲಿ ದೊರೆತ ಬಳೆಗಳ ಚೂರಿನ ಜಾಡು ಹಿಡಿದು ಹೊರಟ ಪೊಲೀಸರ ಬಲೆಗೆ ಇಬ್ಬರು ಕಳ್ಳಿಯರು ಮತ್ತು ಇಬ್ಬರು ಪುರುಷ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಪ್ರಕರಣ ನಡೆದ ಮೂರೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ವಾಡಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 36000 ರೂ. ಮೌಲ್ಯದ 6 ಬ್ಯಾಟರಿಗಳು ಮತ್ತು ಕಳ್ಳತನಕ್ಕೆ ಬಳಸಲಾಗಿದ್ದ 25 ಲಕ್ಷ ರೂ. ಮೌಲ್ಯದ ಎರಡು ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.