ಕಲಬುರಗಿ: ಹಿರಿಯ ಲೇಖಕ, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಗವೀಶ ಹಿರೇಮಠ ಅವರು ಆಗಸ್ಟ್ ೧೩ ರಂದು ಮಧ್ಯಾಹ್ನ ೨.೫೦ ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೭೪ ವರ್ಷ ವಯಸ್ಸಾಗಿತ್ತು. ಪತ್ನಿ ಸುಶೀಲಾ ಹಿರೇಮಠ, ಪುತ್ರ ಸಂತೋಷ , ಸೊಸೆ ಮತ್ತು ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಗುಲ್ಬರ್ಗ ವಿವಿಯಲ್ಲಿ ಗ್ರಂಥಾಲಯ ವಿಭಾಗದಲ್ಲಿದ್ದ ಅವರು ೨೦೦೪ ರಲ್ಲಿ ನಿವೃತ್ತಿಯಾಗಿದ್ದರು. ಕಾವ್ಯ, ಕಾದಂಬರಿ, ಚರಿತ್ರೆ, ನಾಟಕ ಮತ್ತು ಅಭಿನಂದನಾ ಗ್ರಂಥ ಸೇರಿದಂತೆ ಸುಮಾರು ೫೦ ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟಿದ್ದಾರೆ.
ಕಳೆದ ಒಂದೆರಡು ತಿಂಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಆಗಸ್ಟ್ ೧೪ ರಂದು ಬೆಳಿಗ್ಗೆ ೧೦ ರ ಸುಮಾರಿಗೆ ಕೊಪ್ಪಳ ಜಿಲ್ಲೆಯ ಬಿಸರಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ : ಹಿರಿಯ ಲೇಖಕ ಗವೀಶ ಹಿರೇಮಠ ಅವರ ನಿಧನಕ್ಕೆ ಕಲಬುರಗಿ ಭಾಗದ ಸಾಹಿತ್ಯ ವಲಯದವರು ಕಂಬನಿ ಮಿಡಿದಿದ್ದಾರೆ.
ಕಸಾಪ ಮಾಜಿ ಅಧ್ಯಕ್ಷ ಪಿ.ಎಂ.ಮಣೂರ, ವೈದ್ಯ ಲೇಖಕರಾದ ಡಾ.ಎಸ್.ಎಸ್.ಗುಬ್ಬಿ, ಗುಲ್ಬರ್ಗ ಫಿಲಂ ಕ್ಲಬ್ ಅಧ್ಯಕ್ಷ ಸಿನಿಮಾ ನಿರ್ಮಾಪಕ ವಜ್ರಕುಮಾರ ಕಿವಡೆ, ಸಿನಿ ನಿದೇರ್ಶಕ ಬಿ.ಸುರೇಶ ಬೆಂಗಳೂರು, ಜನರಂಗ ತಂಡದ ಮುಖ್ಯಸ್ಥ ಶಂಕ್ರಯ್ಯ ಘಂಟಿ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕಲಬುರಗಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಟಿ.ಪೋತೆ, ಲೇಖಕ ಬಿ.ಎಚ್.ನಿರಗುಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ, ರಂಗತಜ್ಞೆ ಡಾ.ಸುಜಾತಾ ಜಂಗಮಶೆಟ್ಟಿ, ಗವೀಶ ಹಿರೇಮಠ ಅವರ ಜೀವನ ಸಾಹಿತ್ಯ ಮೇಲೆ ಪಿಎಚ್‌ಡಿ (೨೧೦೮) ಮಾಡಿದ್ದ ಡಾ.ಕೆ.ಗಿರಿಮಲ್ಲ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.