ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಗಲಭೆ ಪೀಡಿತ ಬೆಂಗಳೂರಿನ ಡಿ ಜಿ. ಹಳ್ಳಿ ಮತ್ತು ಕೆ ಜಿ ಹಳ್ಳಿ ಪ್ರದೇಶಗಳಿಗೆ ಗೃಹ ಸಚಿವ ಶ್ರೀ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಭೇಟಿ ನೀಡಿ ಪೊಲೀಸರು ಹಾಗೂ ಸಂತೃಸ್ಥ ನಾಗರಿಕರಲ್ಲಿ ಸ್ಥೈರ್ಯ ತುಂಬಿದರು.
ಗಲಭೆಕೋರರು ಡಿ ಜಿ ಹಳ್ಳಿ ಪೊಲೀಸ್ ಠಾಣೆ, ಹತ್ತಾರು ಮನೆಗಳು, ಅಂಗಡಿಗಳು, ನೂರಾರು ವಾಹನಗಳಿಗೆ ಬೆಂಕಿಹಚ್ಚಿ ನಡೆಸಿರುವ ವಿಧ್ವಂಸ ಕೃತ್ಯಗಳಿಂದ ಆಸ್ತಿಪಾಸ್ತಿಗೆ ಆಗಿರುವ ಅಪಾರ ಪ್ರಮಾಣದ ಹಾನಿಯನ್ನು ಕಂಡು ಸಚಿವರು ಖೇದ ವ್ಯಕ್ತಪಡಿಸಿದರು. ಗಲಭೆಕೋರರ ಗುಂಪುಗಳು ಈ ಭಾಗದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮನೆಮುಂದೆ ನಿಲ್ಲಿಸಿರುವ ನೂರಾರು ಕಾರು-ಬೈಕುಗಳು, ಕೈಗಾಡಿಗಳನ್ನು ಸುಟ್ಟುಹಾಕಿವೆ. ಡಿ ಜಿ ಹಳ್ಳಿ ಪೊಲೀಸ್ ಠಾಣೆ, ಪೊಲೀಸ್ ವಾಹನಗಳಲ್ಲದೆ ಅನೇಕ ಹಿಂದುಗಳ ಮನೆಗಳಿಗೂ ಬೆಂಕಿಹಚ್ಚಿವೆ. ಕೆ. ಜಿ ಹಳ್ಳಿ. ಪೊಲೀಸ್ ಠಾಣೆ ಮೇಲೂ ದಾಳಿ ಮಾಡಿವೆ.
ಕೇಂದ್ರ ಸಚಿವ ಸದಾನಂದಗೌಡ ಅವರು ಎರಡೂ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿದರು. ಹಾಗೆಯೇ ಗಲಭೆ ಪೀಡಿತ ಬಿಜೆಪಿ ಕಾರ್ಯಕರ್ತರಾದ ಮುನೆಗೌಡ, ಅರುಣ ಮುಂತಾದವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು. “ತಾವಿಲ್ಲಿ ಅಲ್ಪಸಂಖ್ಯಾತರಾಗಿದ್ದೇವೆ. ಅಸುರಕ್ಷಿತರಾಗಿದ್ದೇವೆ. ನಮ್ಮ ಜೀವಕ್ಕೆ ರಕ್ಷಣೆ ಬೇಕು. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅವರನ್ನೆಲ್ಲ ತಕ್ಷಣ ಬಂಧಿಸಬೇಕು” ಎಂದು ಅನೇಕ ಸಂತ್ರಸ್ತ ಹಿಂದುಗಳು ವಿಶೇಷವಾಗಿ ಮಹಿಳೆಯರು ಸಚಿವರನ್ನು ವಿನಂತಿಸಿದರು. ಸಂತ್ರಸ್ತರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಉಪಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ ಅವರೂ ಜೊತೆಯಾದರು.
ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡರು – ಪೊಲೀಸರು ಗಲಭೆಯನ್ನು ನಿಯಂತ್ರಿಸಲು ಸಂಯಮದಿಂದ ವರ್ತಿಸಿದ್ದಾರೆ. ಗಲಭೆಕೋರರು ವಾಹನ, ಮನೆಗಳಿಗೆ ಬೆಂಕಿಹಚ್ಚುವುದನ್ನು ಮುಂದುವರಿಸಿದಾಗ ಅನಿವಾರ್ಯವಾಗಿ ಗೋಲಿಬಾರ್ ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ನಿರಪರಾದಿಗಳ್ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ ದೊಂಬಿಯಲ್ಲಿ ತೊಡಗಿದವರನ್ನು ಯಾರನ್ನೂ ಬಿಡುವುದಿಲ್ಲ. ರಾತ್ರಿಯೇ ಗಲಭೆಯನ್ನು ನಿಯಂತ್ರಿಸಿರುವ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ.” ಎಂದು ಹೇಳಿದರು.
ಇದಕ್ಕೂ ಮೊದಲು ಸಚಿವ ಸದಾನಂದ ಗೌಡರು ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಲಭೆಯಾದ ಹಿನ್ನಲೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಧಾವಿಸಿದರು. ಹಾಗೆಯೇ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪನವರ ಅಧ್ಯಕ್ಷತೆಯಲ್ಲಿ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.