ಎಲ್ಲ ಹುದ್ದೆಗಳಿಗೆ ಅರ್ಹ ಅಧಿಕಾರಿಗಳ ನೇಮಕಾತಿ, ಮುಂಬಡ್ತಿ ನೀಡಲು ಶಾಸಕ ಖರ್ಗೆ ಆಗ್ರಹ

0
53

ಕಲಬುರಗಿ: ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರ ಹುದ್ದೆಗಳಿಗೆ ಮುಂಬಡ್ತಿ ಹೊಂದಲು ಅರ್ಹ ಅಧಿಕಾರಿಗಳು ಇದ್ದರೂ ಕೂಡಾ ಗ್ರೆಡ್ 2 ವೃಂದದ ಸಹಾಯಕ ನಿರ್ದೇಶಕರನ್ನು ಸ್ವಂತ ವೇತನ ಶ್ರೇಣಿ  ಮೇರೆಗೆ ಕೆಲ ಜಿಲ್ಲೆಗಳಿಗೆ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲು ಆದೇಶ ಹೊಡಿಸಲಾಗಿದೆ. ಇದರಿಂದಾಗಿ ಜ್ಯೇಷ್ಠತೆಯಲ್ಲಿ ಕಿರಿಯರಾದ ಗ್ರುಪ್ 2 ವೃಂದದ ಅಧಿಕಾರಿಗಳ ಅಡಿಯಲ್ಲಿ  ಅವರಿಗಿಂತ ಜ್ಯೇಷ್ಠತೆಯಲ್ಲಿ ಹಿರಿಯರಾದ ಅಧಿಕಾರಿಗಳು ಅವರ ಆಧೀನದಲ್ಲಿ ಕೆಲಸ ಮಾಡುವಂತಾಗುತ್ತದೆ ಎನ್ನುವ ಆರೋಪಗಳಿವೆ ಹಾಗಾಗಿ ಈ ನ್ಯೂನ್ಯತೆಯನ್ನು ಸರಿಪಡಿಸಿ ನಿಯಮಾನುಸಾರ ಮುಂಬಡ್ತಿ ನೀಡುವಂತೆ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಸಮಾಜಕಲ್ಯಾಣ ಸಚಿವರಿಗೆ ಶಾಸಕರು ಪತ್ರ ಬರೆದು ಆಗ್ರಹಿಸಿದ್ದಾರೆ.

ಜ್ಯೇಷ್ಠತೆಯಲ್ಲಿ ಕಿರಿಯ ಅಧಿಕಾರಿಗಳಿಗೆ ನಿಯಮಬಾಹಿರವಾಗಿ ಉಪನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಿದ್ದು ಇಲಾಖೆಯಲ್ಲಿ ಅರಾಜಕತೆ ಹಾಗೂ ಭ್ರಷ್ಟಾಚಾರ ಮನೆ ಮಾಡಿರುವುದಕ್ಕೆ ಇದೊಂದು ನಿದರ್ಶನವಾಗಿದೆ. ಇದರಿಂದಾಗಿ ಪ್ರಮಾಣಿಕ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ, ಇಲಾಖೆಯಲ್ಲಿ‌ ಖಾಲಿ ಇರುವ ಹುದ್ದೆಗಳಿಗೆ  ಹಾಲಿ ಚಾಲ್ತಿಯಿರುವ ವೃಂದ ಹಾಗೂ ನೇಮಕಾತಿ ನಿಯಮಗಳ ಅನ್ವಯ ಅರ್ಹ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ಆಯಾ ವೃಂದದ ಅಧಿಕಾರಿಗಳು ಅಲ್ಲಿಯೇ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿರುವ 34  ಉಪನಿರ್ದೇಶಕರ ಹುದ್ದೆಗಳ ಪೈಕಿ 30 ಹುದ್ದೆಗಳಿಗೆ ಚಾಲ್ತಿಯಲ್ಲಿರುವ ವೃಂದ ಹಾಗೂ ನೇಮಕಾತಿ ನಿಯಮಗಳು 1985 ಅನ್ವಯ ದಿನಾಂಕ,  13.03.2020 ಕ್ಕೆ ಐದು ವರ್ಷ ಅರ್ಹತಾ ಸೇವೆ ಸಲ್ಲಿಸಿದ ಸಹಾಯಕ‌ ನಿರ್ದೇಶಕರ ಗ್ರೇಡ್ 1 ಹುದ್ದೆಗಳಿಗೆ ಬಡ್ತಿ ನೀಡಲು ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಕೇವಲ ಜಂಟಿ‌ನಿರ್ದೇಶಕ ವೃಂದದಿಂದ ಅಪರ ನಿರ್ದೇಶಕರ ವೃಂದಕ್ಕೆ ಬಡ್ತಿ ನೀಡುವ ವಿಚಾರ ಕುರಿತು ಮಾತ್ರ ಚರ್ಚಿಸಿ ಸಭೆ ಮುಂದೂಡಲಾಗಿದೆ ಎನ್ನುವ ಮಾಹಿತಿ‌ ಇದ್ದು ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾವು ಈ‌ ಹಿಂದೆ‌ ಸಮಾಜಕಲ್ಯಾಣ ಸಚಿವರಾಗಿದ್ದಾಗ ಆಡಳಿತಾತ್ಮಕವಾಗಿ ಇಲಾಖೆಯನ್ನು ಬಲಪಡಿಸುವ ಉದ್ದೇಶದಿಂದ ತೆಗೆದುಕೊಂಡ ಕೆಲ ಗಮನಾರ್ಹ ಹಾಗೂ ಪ್ರಮುಖ ನಿರ್ಧಾರಗಳನ್ನು ಮೆಲುಕು ಹಾಕಿರುವ ಶಾಸಕರು, ” ಸಮಾಜ ಕಲ್ಯಾಣ ಇಲಾಖೆಯ ಶೇ 50 ರಷ್ಟು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಾಗೂ ಬೇರೆ ಇಲಾಖೆಯ ಅಧಿಕಾರಿಗಳು ಸಮಾಜಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಗ್ರೇಡ್ 2 ವೃಂದದ ಅಧಿಕಾರಿಗಳು ಉಪನಿರ್ದೇಶಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನು ಮನಗಂಡು ಆಯಾ ಇಲಾಖೆಯ ಅಧಿಕಾರಿಗಳು ಅಲ್ಲಿಯೇ ಕೆಲಸ ಮಾಡುವಂತೆ ಹಾಗೂ ಗ್ರೇಡ್ 2 ವೃಂದದ ಅಧಿಕಾರಿಗಳನ್ನು ಪ್ರಭಾರಿ ಉಪನಿರ್ದೇಶಕರ ಹುದ್ದೆಯಿಂದ ಮುಕ್ತಗೊಳಿಸಿ ತಾಲೂಕಿಗೆ ವಾಪಸ್ ಕಳಿಸಲಾಗಿತ್ತು” ಎಂದು ಪತ್ರದಲ್ಲಿ ಒತ್ತಿಹೇಳಿದ್ದಾರೆ.

ಮುಂದುವರೆದು, 2015 ರಲ್ಲಿ ಇಲಾಖೆ ಪುನರ್ರಚನೆ ಸಂದರ್ಭದಲ್ಲಿ ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ಹುದ್ದೆಯನ್ನು ಉಪನಿರ್ದೇಶಕರ ಹುದ್ದೆಗೆ ಮೇಲ್ದರ್ಜೆಗೇರಿಸಿ ಜ್ಯೇಷ್ಠತೆಯ ಆಧಾರದ ಮೇಲೆ ಸಹಾಯಕ ನಿರ್ದೇಶಕರು ಗ್ರೇಡ್ 1 ವೃಂದದ ಅಧಿಕಾರಿಗಳನ್ನು ಸ್ವಂತ ವೇತನ ಶ್ರೇಣಿ ಮೇರೆಗೆ ಉಪನಿರ್ದೇಶಕರ ವೃಂದದ ಹುದ್ದೆಗೆ ಕರ್ತವ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿತ್ತು ಎಂದು  ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here