NEP ಕರ್ನಾಟಕದಲ್ಲೇ ಮೊದಲು ಜಾರಿ: ಶಿಕ್ಷಣ ಮಾರಾಟಕ್ಕೆ ಕರ್ನಾಟಕವೇ ಬಲಿಪಶು: ಕೆವಿಎಸ್‌

0
70

ಬೆಂಗಳೂರು: ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಿಗೆ ಜಾರಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು ಹೇಳಿದ್ದಾರೆ. ಅವರ ಹೆಳಿಕೆಯನ್ನು ವಿರೋಧಿಸಿರುವ ಕೆವಿಎಸ್‌, ಶಿಕ್ಷಣವನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಹಾತೊರೆಯುತ್ತಿದ್ದು, ಶಿಕ್ಷಣದ ಖಾಸಗೀಕರಣಕ್ಕೆ ನಾವೇ ಮೊದಲಾಗುತ್ತೇವೆ ಎಂದು ಸರ್ಕಾರ ಮುಂದಾಗಿದೆ ಎಂದು ಹೇಳಿದೆ.

ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವೇ ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಡೀ ದೇಶದ ದಿಕ್ಸೂಚಿಯನ್ನೇ ಬದಲಿಸುವ ಶಕ್ತಿ ಇರುವ ಹಾಗೂ ಶೈಕ್ಷಣಿಕ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ. ಹೀಗಾಗಿ ಈ ನೀತಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಿಗೆ ಜಾರಿ ಮಾಡುತ್ತೇವೆ ಎಂದು ಅಶ್ವತ್ಥ ನಾರಾಯಣ ಇಂದು ರಾಮನಗರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Contact Your\'s Advertisement; 9902492681

“ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲೇ ಮೊದಲು ಜಾರಿಗೊಳಿಸಲು ಮುಂದಾಗಿರುವ ಸರ್ಕಾರ, ಶಿಕ್ಷಣವನ್ನು ಮಾರಾಟದಲ್ಲಿ ನಾವೇ ಮೊದಲಾಗುತ್ತೇವೆ ಎಂದು ಹೇಳುತ್ತಿದೆ. ಇದು ನಿಜಕ್ಕೂ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಎನ್‌ಇಪಿ ಬಗೆಗೆ ಕೂಲಂಕಶವಾಗಿ ಚರ್ಚಿಸಬೇಕಿತ್ತು. ಆದರೆ, ಅದಾವುದನ್ನೂ ಸರ್ಕಾರ ಮಾಡಿಲ್ಲ. ಈ ಹಿಂದೆ ಎನ್‌ಇಪಿ ಬಗೆಗೆ ಸಲಹೆಗಳನ್ನು ಕೊಡಿ ಎಂದು ಹೇಳಿದ್ದರು. ರಾಜ್ಯದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳೂ ಸಲಹೆ ನೀಡಿದ್ದವು. ಆದರೆ, ಯಾವುದೇ ಸಲಹೆಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ” ಎಂದು ಕೆವಿಎಸ್‌ನ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆಯವರು ಅರೋಪಿಸಿದ್ದಾರೆ.

ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ಎಂದಿಗೂ ಉತ್ಸಾಹ ತೋರಿಸದೇ ಇರುವ ಇಂದಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು. ಶಿಕ್ಷಣವನ್ನು ಖಾಸಗೀಕರಣ ಗೊಳಿಸಲು ತುದಿಗಾಲಿನಲ್ಲಿ ನಿಂತಿವೆ. ಎನ್‌ಇಪಿ ಮೂಲಕ ಶಿಕ್ಷಣವನ್ನು ವಿದೇಶಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾರಾಟದ ಸರಕನ್ನಾಗಿಸಲು ಮುಂದಾಗಿವೆ. ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಶಿಕ್ಷಣದ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ನಾನೇ ಮೊದಲು ಎಂದು ಹೇಳುತ್ತಿದೆ. ಈ ಉತ್ಸಾಹವನ್ನು ಗುಣಮಟ್ಟದ ಉಚಿತ ಶಿಕ್ಷಣ ನೀಡಲು ತೋರಿಸದೇ ಇರುವುದು ರಾಜ್ಯದ ವಿಪರ್ಯಾಸ ಎಂದು ಸರೋವರ್ ಹೇಳಿದ್ದಾರೆ.

ಎನ್‌ಇಪಿ ಬಗೆಗೆ ಮಾಧ್ಯಮಗಳಿಗೇ ಒಂದು ಕರಡು ಕೊಟ್ಟು, ಬೇರೊಂದು ಕರಡನ್ನು ಜಾರಿ ಮಾಡಲು ಮುಂದಾಗಿದೆ. ಇಂತಹ ಕಣ್ಣಾಮುಚ್ಚಾಲೆಯ ಕೆಲಸವನ್ನ ಬೇರಾವ ಸರ್ಕಾರಗಳು ಮಾಡಿರಲಿಲ್ಲ. ಕರ್ನಾಟಕದಲ್ಲಿ ಎಲ್ಲಾ ವಿದ್ಯಾರ್ಥಿ ಸಂಘಟನೆಗಳೂ ಎನ್‌ಇಪಿಯನ್ನ ವಿರೋಧಿಸುತ್ತಿದ್ದರೂ, ರಾಜ್ಯದಲ್ಲೇ ಮೊದಲು ಜಾರಿಮಾಡುತ್ತೇವೆ ಎನ್ನುತ್ತಿರುವುದು ಖಂಡನೀಯ. ಗುಣಮಟ್ಟದ ಉಚಿತ ಶಿಕ್ಷಣವನ್ನು ನಾವೇ ಮೊದಲು ಕೊಡುತ್ತೇವೆ ಎಂದು ಹೇಳಬೇಕಿದ್ದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು, ಖಾಸಗೀಕರಣಕ್ಕೆ ನಾವೇ ಮುಂದು ಎನ್ನುತ್ತಿರುವುದನ್ನು ರಾಜ್ಯದ ವಿದ್ಯಾರ್ಥಿ ಸಂಘಟನೆಗಳು ಒಪ್ಪುವುದಿಲ್ಲ. ಎನ್‌ಇಪಿ ರಾಜ್ಯದಲ್ಲಿ ಜಾರಿಯಾಗಲು ನಾವು ಬಿಡುವುದಿಲ್ಲ ಎಂದು ಸರೋವರ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here