ಆಳಂದ: ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಾಪತ್ತೆಯಾಗಿದ್ದಾರೆ ಎಂದಿರುವ ಕಾಂಗ್ರೆಸ್ ಮುಖಂಡ ಬಿ ಆರ್ ಪಾಟೀಲ ಹೇಳಿಕೆಗೆ ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ತಿರುಗೇಟು ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರ, ಅಧಿಕಾರಿಗಳ ಮೂಲಕ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿಯೊಂದು ಘಟನೆಗಳ ಮಾಹಿತಿಯನ್ನು ಪಡೆಯುತ್ತಿದ್ದಾರೆ ಅಷ್ಟೇ ಅಲ್ಲದೇ ಆಡಳಿತಾತ್ಮಕವಾಗಿ ಯಾವುದೇ ತೊಂದರೆಗಳು ಎದುರಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆಯೂ ಬಿ ಆರ್ ಪಾಟೀಲ ಅವರಿಗೆ ಇಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರ ಕಳೆದುಕೊಂಡಗಾಲೆಲ್ಲ ಅಧಿಕಾರದಲ್ಲಿರುವ ಸರ್ಕಾರಕ್ಕೆ ಪತ್ರ ಬರೆಯುವ ಚಾಳಿ ಹೊಂದಿದ್ದಾರೆ. ಈಗ ಸಧ್ಯ ಉಸ್ತುವಾರಿ ಸಚಿವರ ಬಗ್ಗೆ ಅವರು ನೀಡಿರುವ ಹೇಳಿಕೆ ಕೇವಲ ಅವರ ಪಕ್ಷದ ಹೈಕಮಾಂಡ್ ಮೆಚ್ಚಿಸುವುದಕ್ಕಾಗಿದೆ ಹೊರತು ಬೇರೆ ಯಾವ ಸದುದ್ದೇಶವನ್ನು ಹೊಂದಿಲ್ಲ ಎಂದು ಟೀಕಿಸಿದ್ದಾರೆ.
ಕೊರೋನಾ ಸಂಕಷ್ಟದ ಕಾಲದಲ್ಲಿ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿದಾಗ ಕಾಂಗ್ರೆಸ್ ಮುಖಂಡರು ಯಾವ ರೀತಿ ವರ್ತನೆ ತೋರಿದ್ದಾರೆ ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಜೊತೆ ಹೇಗೆ ವರ್ತಿಸಬೇಕು ಎನ್ನುವುದನ್ನು ಕಾಂಗ್ರೆಸ್ ಮುಖಂಡರಿಗೆ ಬಿ ಆರ್ ಪಾಟೀಲ ತಿಳಿಸಿ ಹೇಳಲಿ ಎಂದು ಒತ್ತಾಯಿಸಿದ್ದಾರೆ.
ಅಷ್ಟಕ್ಕೂ ಉಸ್ತುವಾರಿ ಸಚಿವರನ್ನು ನೇಮಿಸುವುದು ನಮ್ಮ ಪಕ್ಷದ ಆಂತರಿಕ ವಿಚಾರ ಅದರಲ್ಲಿ ಬಿ ಆರ್ ಪಾಟೀಲರು ಮೂಗು ತೋರಿಸುವ ಅವಶ್ಯಕತೆ ಇಲ್ಲ. ಕೊರೋನಾ ಆರಂಭವಾದ ದಿನದಿಂದ ಸ್ವತ: ಬಿ ಆರ್ ಪಾಟೀಲರು ತಾವು ಪ್ರತಿನಿಧಿಸುತ್ತಿದ್ದ ಆಳಂದ ಮತಕ್ಷೇತ್ರಕ್ಕೆ ಎಷ್ಟು ಸಲ ಭೇಟಿ ನೀಡಿದ್ದಾರೆ?.ಈಗ ಕೊರೋನಾ ಸ್ವಲ್ಪ ಹತೋಟಿಗೆ ಬರುತ್ತಿದ್ದಂತೆ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊರೋನಾ ಮಹಾಮಾರಿಯ ವಿರುದ್ಧ ಸರ್ಕಾರ ಮತ್ತು ಜನತೆ ಹೋರಾಟ ಮಾಡುತ್ತಿದ್ದರೇ ಕಾಂಗ್ರೆಸ್ ಮತ್ತು ಅದರ ಮುಖಂಡರು ಸುಳ್ಳು ಆರೋಪ ಮಾಡುವುದರಲ್ಲಿ ನಿರತಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಕಾರ್ಯವೈಖರಿಯ ಕುರಿತು ಹೊಗಳುತ್ತಿರುವ ಬಿ ಆರ್ ಪಾಟೀಲರ ಹೇಳಿಕೆಯ ಹಿಂದೆ ರಾಜಕೀಯ ಅಡಗಿದೆ. ಮುಖ್ಯಮಂತ್ರಿಗಳನ್ನು ಹೊಗಳಿ ಬಿಜೆಪಿಗೆ ಸಮೀಪವಾಗುವ ಲಕ್ಷಣ ಅವರ ಹೇಳಿಕೆಯ ಹಿಂದಿದೆ ಎಂದು ಆಳಂದ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಪತ್ರಿಕೆಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.