ಶಹಾಬಾದ: ಶತಮಾನಗಳಿಂದ ಬ್ರಿಟಿಷರ ದಾಸ್ಯದಿಂದ ಬಳಲಿದ ಭಾರತಕ್ಕೆ ತಮ್ಮ ತ್ಯಾಗ, ಬಲಿದಾನ ನೀಡುವುದರ ಮೂಲಕ ನಮಗೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟ ಮಹಾನ್ ಹೋರಾಟಗಾರರನ್ನು ಸ್ಮರಿಸುವ ವಿಶೇಷ ದಿನವೇ ಸ್ವಾತಂತ್ರ್ಯ ದಿನ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ಶನಿವಾರ ತಾಲೂಕಾಢಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಲು ಗಾಂಧೀಜಿ, ಭಗತ್ಸಿಂಗ್,ಲಾಲಬಹಾದ್ದೂರ ಶಾಸ್ತ್ರಿ, ಚಂದ್ರಶೇಖರ ಆಜಾದ, ಸುಭಾಶ್ಚಂದ್ರಭೋಸರಂತಹ ಅಸಂಖ್ಯ ಮಹನೀಯರು ತಮ್ಮ ವೈಯಕ್ತಿಕ ಬದುಕಿನ ಸಂತೋಷಗಳನ್ನು ತ್ಯಾಗ ಮಾಡಿದರು.ಬ್ರಿಟಿಷರ ವಿರುದ್ಧ ಉಗ್ರ ಹೋರಾಟದ ಮೂಲಕ ಇತಿಹಾಸ ಬರೆದರು.ನಮಗೆ ದೇಣಿಗೆಯಾಗಿ ಕೊಟ್ಟ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಸಾಗಬೇಕಾಗಿದೆ. ಭಾರತೀಯರಾದ ನಾವು ಯಾವುದೇ ಜಾತಿ,ಮತ,ಪಂಥ, ಧರ್ಮದ ಹೆಸರಿನಲ್ಲಿ ಬೇಧ-ಭಾವ ಮಾಡದೇ ಎಲ್ಲರೂ ಕೂಡಿಕೊಂಡು ಬಾಳುವುದರ ಮೂಲಕ ಭಾರತದ ಭವಿಷ್ಯ ಉಜ್ವಲಗೊಳಿಸೋಣ ಎಂದು ಹೇಳಿದರು.
ಪೌರಾಯುಕ್ತ ಕೆ.ಗುರಲಿಂಗಪ್ಪ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಏಮನಾಥ ರಾಠೋಡ, ಅಣವೀರ ಇಂಗಿನಶೆಟ್ಟಿ, ಅರುಣ ಪಟ್ಟಣಕರ್, ಸುರೇಶ ಚವ್ಹಾಣ, ಶೇರ್ ಅಲಿ ಸೇರಿದಂತೆ ಅನೇಕ ಜನರು ಹಾಜರಿದ್ದರು.