ಶಹಾಬಾದ:ಮನಸ್ಸಿಗೆ ಮುದ ನೀಡುವ ಹಸಿರು ನಿಸರ್ಗವನ್ನು ಉಳಿಸಿದರೆ ಮಾತ್ರ ನಮ್ಮೆಲ್ಲರ ಉಸಿರು ಉಳಿಯಲಿದೆ ಎಂದು ಪಾಳಾದ ಗುರುಮೂರ್ತಿ ಶಿವಾಚಾರ್ಯರು ಹೇಳಿದರು.
ಅವರು ಗುರುವಾರ ತೊನಸಿನಹಳ್ಳಿ(ಎಸ್) ಗ್ರಾಮದ ಕೊತ್ತಲಪ್ಪ ಮುತ್ಯಾ ಶಾಲಾ ಆವರಣದಲ್ಲಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಜೂನ್ ತಿಂಗಳಲ್ಲಿ ಮಾತ್ರ ಪರಿಸರ ದಿನಾಚಾರಣೆ ಆಚರಿಸಿ ಸಸಿ ನೆಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ವನಮಹೋತ್ಸವ ನಿತ್ಯೋತ್ಸವವಾದಾಗ ಮಾತ್ರ ಪರಿಸರವನ್ನು ಬೆಳೆಸಲು ಸಾಧ್ಯ.ಗ್ರಾಮದಲ್ಲಿ ಯಾವುದಾದರೊಂದು ಸ್ಥಳವನ್ನು ಆಯ್ದುಕೊಂಡು ಸ್ವಚ್ಚತಾ ಕಾರ್ಯದ ಮುಖಾಂತರ ಹಸಿರು ಉಳಿಸುವ ಜೊತೆಗೆ ಗ್ರಾಮದ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ದೈನಂದಿನ ಚಟುವಟಿಕೆಗಳಿಗೆ ಅವಶ್ಯವಾಗಿರುವ ಪ್ರಕೃತಿಯನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪಯತ್ನವಾಗಬೇಕು ಎಂದು ಹೇಳಿದರು.
ಕೊಟ್ಟೂರೇಶ್ವರ ಶರಣರು ಮಾತನಾಡಿ, ಶುದ್ದ ವಾತಾವರಣ ನಿರ್ಮಾಣವಾಗಬೇಕಾದರೆ ಸುತ್ತಲು ತಂಪು ನೀಡುವ, ಕಣ್ಣಿಗೆ ಮುದ ನೀಡುವ ಹಸಿರು ಗಿಡಗಳ ಸಾಲು ಇರಬೇಕು.ಗಿಡಗಳಿಂದ ವಾತಾವಣದಲ್ಲಿ ಶುದ್ದವಾಗುತ್ತದೆ. ಪ್ರತಿ ಮಕ್ಕಳು ತಮ್ಮ ಮನೆಯಲ್ಲಿ ಶಾಲೆಯಲ್ಲಿ ಗಿಡಗಳನ್ನು ನೆಡಬೇಕು. ಮಕ್ಕಳಿಂದಲೇ ಗಿಡಗಳನ್ನು ನೆಡೆಸಿದಾಗ, ನಾವು ನೆಟ್ಟ ಗಿಡವೆಂಬ ಅಭಿಮಾನದಿಂದ ಪ್ರೀತಿ ಮೂಡಿ ಅವುಗಳನ್ನು ಕಾಪಾಡುತ್ತಾರೆ ಎಂದು ಸಲಹೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ ಮಾಣಿಕ್,ಗ್ರಾಮದ ಮುಖಂಡರಾದ ನಿಂಗಣ್ಣಗೌಡ ಮಾಲಿ ಪಾಟೀಲ, ಶಿವಶರಣಪ್ಪಗೌಡ ಪೊಲೀಸ್ ಪಾಟೀಲ,ರೇವಣಸಿದ್ದಪ್ಪ ಕೆಲ್ಲೂರ್,ಚಂದ್ರಶೇಖರ ಅರಳಿ,ಸಂಗಣಗೌಡ ರಾಮಶೆಟ್ಟಿ,ನಾಗರತ್ನ ಇಟಗಿ, ಬಸವರಾಜ ಗೊಳೇದ್,ಹುಣಚಪ್ಪ ಇಟಗಿ,ಪ್ರಭು ನಾಟೇಕಾರ,ಶಾಂತಮಲ್ಲ ಶಿವಭೋ ಇತರರು ಇದ್ದರು.