ಶಹಾಪುರ : ತಾಲ್ಲೂಕಿನಾದ್ಯಂತ ಹಾಗೂ ಕೃಷ್ಣಾ ನದಿಯ ತಟದಲ್ಲಿರುವ ವಿವಿಧ ಗ್ರಾಮಗಳಲ್ಲಿ ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದ ಮನೆಗಳು ಕಳೆದುಕೊಂಡವರ ಸಮೀಕ್ಷೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಕೂಡಲೆ ಪರಿಹಾರ ವಿತರಿಸಬೇಕೆಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಶರಣುರಡ್ಡಿ ಹತ್ತಿಗೂಡೂರ ಆಗ್ರಹಿಸಿದ್ದಾರೆ.
ಸತತವಾಗಿ ಸುರಿಯುವ ಮಳೆಗೆ ಹಲವಾರು ಮನೆಗಳು ಕುಸಿದು ಬಿದ್ದು ಬದುಕು ಬೀದಿಪಾಲಾಗಿವೆ ಆದ್ದರಿಂದ ನಿರ್ಗತಿಕ ಕುಟುಂಬದವರಿಗೆ ಸರ್ಕಾರ ಸೂರು ಕಲ್ಪಿಸುವ ಕೆಲಸ ಮಾಡಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಗೆ ಮನೆಗಳು ಕಳೆದುಕೊಂಡವರು ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೂ ಯಾವುದೇ ರೀತಿಯ ಸಮೀಕ್ಷೆ ಮಾಡದೆ ಇರುವುದು ನೋವಿನ ಸಂಗತಿ ಎಂದು ಹೇಳಿದರು.
ಯಾವುದೇ ಕಾರಣಕ್ಕೆ ಈ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸದೆ ಶೀಘ್ರ ಸಮೀಕ್ಷೆ ಕೈಗೊಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಲೆಕ್ಕಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಹೇಳಿದರು. ಸಮೀಕ್ಷೆ ನಡೆಸುವ ಹಾಗೂ ಪರಿಹಾರ ವಿತರಿಸುವ ವಿಷಯದಲ್ಲಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.