ಶಹಾಬಾದ:ಬಿತ್ತನೆಯಾಗಿ ಉತ್ತಮವಾಗಿ ಬೆಳೆದು ನಿಂತಿದ್ದ ಹೆಸರು ಬೆಳೆ ಕಟಾವಿಗೆ ಸಿದ್ಧವಾಗಿದ್ದ ಸಂದರ್ಭದಲ್ಲಿಯೇ ನಿರಂತರವಾಗಿ ಸುರಿದ ಮಳೆಯ ಹೊಡೆತಕ್ಕೆ ಗಿಡದಲ್ಲಿಯೇ ಮೊಳಕೆಯೊಡೆದು ಸಂಪೂರ್ಣ ಹಾಳಾಗಿದೆ.ಇದನ್ನು ಕಂಡ ರೈತ ಸಮೂಹ ಕಂಗಾಲಾಗಿದೆ.
ಶಹಾಬಾದ ತಾಲೂಕಿನ ಗೋಳಾ, ತೊನಸನಹಳ್ಳಿ(ಎಸ್), ಕಡೆಹಳ್ಳಿ, ತೆಗನೂರ, ಮರತೂರ, ತರಿತಾಂಡಾ,ಭಂಕೂರ ಸೇರಿದಂತೆ ಇತರ ಹಳ್ಳಿಗಳಲ್ಲಿ ಬೆಳೆದ ಬೆಳೆ ತೇವಾಂಶ ಹೆಚ್ಚಾಗಿ ಬೆಳೆ ಹಾಳಾಗಿದೆ.ಅಲ್ಲದೇ ಬಂಪರ್ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ರೈತರು ಇನ್ನೇನೂ ವಾರದಲ್ಲಿ ರಾಶಿ ಮಾಡಿ ಉತ್ತಮ ಇಳುವರಿ ಬರುವುದೆಂಬ ಆಸೆಹೊತ್ತಿದ್ದ ಸಮಯದಲ್ಲೇ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ಹೆಸರು ಬೆಳೆಯಂತೂ ಗಿಡದಲ್ಲೇ ಬೀಜಗಳು ಮೊಳಕೆಯೊಡೆದು ಸಸಿಯಾಗಿವೆ.ಇದರಿಂದ ರೈತರು ಕಣ್ಣೀರುಡುತ್ತಿದ್ದಾರೆ.
ಮುಂಗಾರಿನನಲ್ಲಿ ಮುಂಕಟ್ಟಿನಲ್ಲಿ ಬಿತ್ತಿದ ಬೆಳೆ ಸಂಪೂರ್ಣ ಹಾಳಾಗಿದೆ.ಆದರೆ ಹಿಂಕಟ್ಟಿನಲ್ಲಿ ಬಿತ್ತಿದ ಬೆಳೆ ಕಟಾವಿಗೆ ಸಿದ್ಧವಾಗಿದೆ.ಅಲ್ಲದೇ ಕೆಲವೊಂದು ಕಡೆಗಳಲ್ಲಿ ರಾಶಿಯೂ ನಡೆಯುತ್ತಿದೆ.ಇದರ ಮಧ್ಯೆಯೂ ಆಗೊಮ್ಮ ಈಗೊಮ್ಮೆ ಎನ್ನುವಂತೆ ಮಳೆಯಾಗುತ್ತಿದ್ದು, ಕಟಾವಿಗೂ ತೊಂದರೆಯಾಗುತ್ತಿದೆ.ಈಗಾಗಲೇ ರಾಶಿಮಾಡಿದ ಹೆಸರು ಕಾಳು ಮೊಳಕೆಯೊಡೆದಿವೆ.ಅಲ್ಲದೇ ಕಪ್ಪು ಬಣ್ಣಕ್ಕೆ ತಿರುಗಿವೆ. ಮತ್ತೆ ಕಾಳುಗಳು ಹೆಚ್ಚಿನ ತೇವಾಂಶದಿಂದ ಬುಸು ಹೊಡೆದಿರುವುದರಿಂದ ರೈತರು ಎಲ್ಲಿಲ್ಲದ ತೊಂದರೆಗೀಡಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹೆಸರು ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಪ್ರಸಕ್ತ ವರ್ಷ ಸಕಾಲಕ್ಕೆ ಬಿತ್ತನೆ ಮಾಡಿದ ರೈತನಿಗೆ ಉತ್ತಮ ಮಳೆಯಾಗಿತ್ತು. ಈ ವರ್ಷ ಮಳೆರಾಯ ತನ್ನ ಕೈ ಹಿಡಿದಿದ್ದಾನೆ.ಉತ್ತಮ ಇಳುವರಿ ಪಡೆದು ಆಥರ್ಿಕ ಸಂಕಷ್ಟದಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ರೈತನಿಗೆ ಮಳೆರಾಯನ ಅವಕೃಪೆಯಿಂದ ಅವನ ಬದುಕು ಮತ್ತೆ ನೀರು ಪಾಲಾಗಿದೆ. ರೈತನ ಬದುಕಿಗೆ ಆಸೆ ಕಲ್ಪಿಸುವ ಈ ಭಾಗದ ಮುಂಗಾರಿನ ವಾಣಿಜ್ಯ ಬೆಳೆ ಹೆಸರು ರೈತರ ಹಣಕಾಸಿನ ಅಡಚಣೆಗಳನ್ನು ನೀಗಿಸುತ್ತಿದ್ದವು.ಆದರೆ ಪ್ರತಿ ವರ್ಷ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಷ್ಟಪಟ್ಟು ಬೆಳೆದ ಬೆಳೆ ಕಣ್ಮುಂದೆ ಹಾಳಾಗುತ್ತಿರುವ ದೃಶ್ಯವನ್ನು ಕಂಡು ಆತಂಕದ ಚಾಯೆಯಲ್ಲಿದ್ದಾರೆ.ಸಾಲ ಮಾಡಿ ಬೀಜ,ಗೊಬ್ಬರ ತಂದು ಬೆಳೆದ ಬೆಳೆ ಹಾಳಾಗಿ ಮತ್ತೆ ಸಾಲದ ಹೊರೆ ಅನುಭವಿಸುವ ಸ್ಥಿತಿ ರೈತಾಪಿ ವರ್ಗದವರಿಗೆ ಬಂದಿದ್ದು, ಸಕರ್ಾರ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ.
ತಾಲೂಕಿನಲ್ಲಿ ಸುಮಾರು 1500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆ ಕಟಾವಿನ ಸಮಯದಲ್ಲೇ ನಿರಂತರವಾಗಿ ಎಡಬಿಡದೇ ಸುರಿದ ಮಳೆಯಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.ಈಗಾಗಲೇ ಜಂಟಿ ಸರ್ವೆ ಮಾಡಿಸಲಾಗುತ್ತಿದ್ದು, ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವತ್ತ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು- ಸುರೇಶ ವರ್ಮಾ
ತಹಸೀಲ್ದಾರರು ಶಹಾಬಾದ.
ಉತ್ತಮ ಬೆಳೆ ಬಂದ ಸಂದರ್ಭದಲ್ಲಿ ಮಳೆಯಿಂದ ಹೆಸರು ಬೆಳೆ ನಷ್ಟವಾಗಿದೆ.ಗಿಡದಲ್ಲಿಯೇ ಬೀಜಗಳು ಮೊಳಕೆಯೊಡೆದಿವೆ.ಇನ್ನೂ ಕೆಲವು ಹೊಲಗಳಲ್ಲಿ ಕಪ್ಪು ಬಣ್ಣಕ್ಕೆ ಮತ್ತು ಬುಸು (ಬಿಳಿ) ಹೊಡೆದಿದಿದ್ದು ಕಂಡು ಬಂದಿವೆ.ಆದ್ದರಿಂದ ಕಂದಾಯ ಹಾಗೂ ಕೃಷಿ ಇಲಾಖೆ ನಷ್ಟದ ಫಸಲಿನ ಜಂಟಿ ಸರ್ವೆ ಮಾಡಲಾಗುತ್ತದೆ- ಕಾಶಿನಾಥ ದಂಡೋತಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಶಹಾಬಾದ.
ಉತ್ತಮ ಬೆಳೆ ಬಂದ ಸಂದರ್ಭದಲ್ಲಿ ಮಳೆಯಿಂದ ಹೆಸರು ಬೆಳೆ ನಷ್ಟವಾಗಿದೆ.ಕೈಯಿಗೆ ಬಂದ ತುತ್ತು , ಬಾಯಿಗೆ ಬರದಂತಾಗಿದ್ದು, ಎಲ್ಲಿಲ್ಲದ ತೊಂದರೆ ಅನುಭವಿಸುವಂತಾಗಿದೆ – ಸತೀಶ ಚವ್ಹಾಣ ರೈತ.