ಕಲಬುರಗಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಿಂದ ಸಾಲ ಪಡೆದು ವೃತ್ತಿಪರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಾಲದ ಮೊತ್ತವನ್ನು ಈ ವರ್ಷ ಶೇ 50ರಿಂದ 70ರಷ್ಟು ಕಡಿತಗೊಳಿಸಲಾಗಿದ್ದು ಸರಕಾರದ ಕ್ರಮವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಬಿನ್ ಅಹ್ಮದ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ನಿಗಮಕ್ಕೆ ಪ್ರಸಕ್ತ ಸಾಲಿನಲ್ಲಿ ಕೇವಲ ? 50 ಕೋಟಿ ಹಂಚಿಕೆ ಮಾಡಲಾಗಿದ್ದು, ನಿಗಮದ ವಿವಿಧ ಯೋಜನೆಗಳ ಜೊತೆಗೆ ಅರಿವು ವಿದ್ಯಾಭ್ಯಾಸ ಯೋಜನೆಗೂ ಇದೇ ಹಣವನ್ನು ಬಳಸಿಕೊಳ್ಳಬೇಕಿದೆ. ಹೀಗಾಗಿ, ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಮೂಲಕ ಸೀಟು ಪಡೆದು ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ವರ್ಷ ನೀಡಲಾದ ಸಾಲದ ಮೊತ್ತದ ಪೈಕಿ ಪ್ರಸಕ್ತ ವರ್ಷ ಶೇ 50ರಷ್ಟು ನೀಡಲಾಗು ವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದಿರುವುದು ವಿದ್ಯಾರ್ಥಿಗಳು ಅಭ್ಯಾಸದ ಮೇಲೆ ಎಳೆದಿರುವ ಬರೆಯಾಗಿದೆ.
ನಿಗಮದಿಂದ ನೀಡಲಾಗುವ ಸಾಲ ಸೌಲಭ್ಯವನ್ನೇ ನಂಬಿಕೊಂಡು ಅಧ್ಯಯನ ಮುಂದುವರಿಸಿರುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದ ಆತಂತ್ರಕ್ಕೀಡಾಗಿದೆ.
ಈಗ ಏಕಾಏಕಿ ಸಾಲದ ಮೊತ್ತ ಕಡಿತ ಮಾಡುವುದರಿಂದ ಉಳಿದ ಹಣ ಹೊಂದಿಸಲು ಬ್ಯಾಂಕುಗಳಿಂದ, ಖಾಸಗಿಯವರಿಂದ ಸಾಲ ಪಡೆಯ ಬೇಕಿದೆ. ಸಾಲ ಸಿಗದಿದ್ದರೆ ಅಧ್ಯಯನವನ್ನೇ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಹಲವು ವಿದ್ಯಾರ್ಥಿಗಳು ಆತಂಕ ತೋಡಿಕೊಂಡಿದ್ದಾರೆ. ಕೂಡಲೇ ಈ ನಿರ್ಧಾರವನ್ನು ಸರಕಾರ ಕೈಬಿಡಬೇಕು ಎಂದು ಮುಬಿನ್ ಅಹ್ಮದ್ ಆಗ್ರಹಿಸಿದ್ದಾರೆ.