ವಾಡಿ: ದಿನಪತ್ರಿಕೆ ಓದುಗರ ಸಂಖ್ಯೆ ಕ್ಷಿಣಿಸುತ್ತಿದೆ ಎಂಬ ನೋವಿನ ಮಧ್ಯೆಯೂ ರಾಜ್ಯದಲ್ಲಿ ಅನೇಕ ಕನ್ನಡ ದಿನಪತ್ರಿಕೆಗಳು ಹುಟ್ಟುತ್ತಿವೆ. ಈ ದಿನಪತ್ರಿಕೆಗಳನ್ನು ಮುದ್ರಿಸುವ ಕಾರ್ಯ ದೊಡ್ಡದಲ್ಲ, ಬೆಳ್ಳಂಬೆಳಗ್ಗೆ ಓದುಗರ ಮನೆ ಬಾಗಿಲಿಗೆ ತಲುಪಿಸುವ ವಿತರಕರ ಸೇವೆ ಬಹು ದೊಡ್ಡದು ಎಂದು ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯಕ್ಷ ಶ್ರವಣಕುಮಾರ ಮೌಸಲಗಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ ಏರ್ಪಡಿಸಲಾಗಿದ್ದ ಸ್ಥಳೀಯ ದಿನಪತ್ರಿಕೆ ವಿತರಕರ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕೋಳಿ ಕೂಗುವ ಮುಂಚೆ, ಓದುಗ ಹಾಸಿಗೆಯಿಂದ ಎಳುವ ಮೊದಲು ಮನೆಯ ಹೊಸ್ತಿಲಲ್ಲಿ ದಿನಪತ್ರಿಕೆ ಬಿದ್ದಿರುತ್ತದೆ. ನಸುಕಿನಲ್ಲಿ ಎದ್ದು ಪತ್ರಿಕೆಗಳನ್ನು ಜೋಡಿಸಿಕೊಂಡು ನಗರದ ವಿವಿಧ ಬಡಾವಣೆಗಳ ಓದುಗರ ಮನೆಗಳಿಗೆ ತೆರಳುವ ಪತ್ರಿಕೆ ವಿತರಕ ಹುಡುಗರು, ಮಳೆ, ಗಾಳಿ, ಚಳಿ ಎನ್ನದೆ ಸೈಕಲ್ ತುಳಿದು ಜಗತ್ತಿನ ಸುದ್ದಿಗಳನ್ನು ಹೊತ್ತು ಬಂದ ಪತ್ರಿಕೆಗಳನ್ನು ಕೊಟ್ಟು ಹೋಗುತ್ತಾರೆ. ಮುದ್ರಣವಾದ ಪತ್ರಿಕೆ ಜನರ ಕೈಗೆ ಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಕಳೆದ ಹಲವಾರು ವರ್ಷಗಳಿಂದ ವಿವಿಧ ದಿನಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡುತ್ತಿರುವ ವಿತರಕರಿಗೆ ಸರಕಾರ ಗುರುತಿಸಬೇಕು. ವಿಶೇಷ ಪ್ಯಾಕೇಜ್‌ನಡಿ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಬೇಕು ಎಂದರು.
ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಬೌದ್ಧ ಸಮಾಜದ ಮುಖಂಡ ರವಿಕುಮಾರ ಸಿಂಗೆ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ರಘುವೀರ ಪವಾರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಜಂಟಿ ಕಾರ್ಯದರ್ಶಿ ಮಡಿವಾಳಪ್ಪ ಹೇರೂರ, ವರದಿಗಾರ ರಾಯಪ್ಪ ಕೊಟಗಾರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
೧೯೮೪ ರಿಂದ ವಾಡಿ ನಗರದಲ್ಲಿ ಕನ್ನಡ, ಇಂಗ್ಲೀಷ್, ಉರ್ದು ಮತ್ತು ಮರಾಠಿ ದಿನಪತ್ರಿಕೆಗಳನ್ನು ವಿತರಿಸಿ ಬದುಕು ಕಟ್ಟುತ್ತಿರುವ ಹಿರಿಯರಾದ ಹಾಜಿಕರೀಮ ಅವರನ್ನು ಸೇರಿದಂತೆ ವಿವಿಧ ದಿನಪತ್ರಿಕೆಗಳ ವಿತರಕರಾದ ಅರೂಣ ಒಡೆಯರಾಜ, ಪ್ರವೀಣ, ಮನೋಜಕುಮಾರ, ಚಂದ್ರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.