ಶಿಕ್ಷಕರ ಸಮಸ್ಯೆಗಳಿಗೆ ಸರಕಾರ ಕಿವುಡಾಗಿದೆ: ಮಹಾಬಲೇಶ್ವರ ರಾವ್

0
100

ವಾಡಿ: ಶಿಕ್ಷಕ ಶಿಕ್ಷಣದ ಹೃದಯವಾದರೆ, ಆ ಹೃದಯದ ಆರೋಗ್ಯ ಕಾಪಾಡಬೇಕಾದ್ದು ಸರಕಾರದ ಆಧ್ಯ ಕರ್ತವ್ಯ. ಶಿಕ್ಷಕರ ಗೋಳು ಕೇಳಿಸಿಕೊಳ್ಳದಷ್ಟು ಸರಕಾರ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ಶಿಕ್ಷಣ ತಜ್ಞ, ನಿವೃತ್ತ ಪ್ರಾಂಶುಪಾಲ ಫ್ರೋ. ಡಾ.ಮಹಾಬಲೇಶ್ವರ ರಾವ್ ದೂರಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಶಿಕ್ಷಕರ-ಉಪನ್ಯಾಸಕರ ಸಮಸ್ಯೆಗಳು ಮತ್ತು ಮುಂದಿನ ದಾರಿ ವಿಷಯದ ಕುರಿತ ರಾಜ್ಯ ಮಟ್ಟದ ಝೂಂ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಸಾಕಷ್ಟು ಅಬ್ಬರದಿಂದ ಬರುತ್ತಿರುವ ಹೊಸ ಶಿಕ್ಷಣ ನೀತಿ-೨೦೨೦ರಲ್ಲೂ ಈ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸೂಚಿಸಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯನ್ನು ಸರಕಾರ ಜಾರಿಗೊಳಿಸುತ್ತಿಲ್ಲ. ಸರಕಾರ ಶಿಕ್ಷಕರ ಸಮಸ್ಯೆಗಳಿಗೆ ಕಿವುಡಾಗಿದೆ.

Contact Your\'s Advertisement; 9902492681

ಕಿವಿ ಇದ್ದರೂ ಕೇಳುತ್ತಿಲ್ಲ. ಸೇವಾ ಭದ್ರತೆ ಸೌಲಭ್ಯ ಪಿಂಚಣಿ ಕೊಡುತ್ತಿಲ್ಲ. ಹಸಿದ ಹೊಟ್ಟೆಯ ಶಿಕ್ಷಕರನ್ನು ಇಟ್ಟುಕೊಂಡು ನಾವು ಅದೆಂತಹ ಶಿಕ್ಷಣ ಒದಗಿಸಲು ಸಾಧ್ಯ? ಎಂದು ಪ್ರಶ್ನಿಸಿದ ಮಹಾಬಲೇಶ್ವರರಾವ್, ಸರಕಾರಗಳು ಮೊದಲು ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಇದುವರೆಗೂ ಎಲ್ಲಾ ಶಿಕ್ಷಕರು ಏನಾದರೂ ಸೌಲಭ್ಯ ಪಡೆದಿದ್ದರೆ ಅದು ಅವರು ಹೋರಾಟದಿಂದ ಪಡೆದುಕೊಂಡಿದ್ದಾರೆ. ಅಂತೆಯೆ ಇಂದಿನ ಎಲ್ಲಾ ಅತಿಥಿ ಶಿಕ್ಷಕರು ಮತ್ತು ಅಸಂಘಟಿತ ಶಿಕ್ಷಕರು ಒಂದಾಗಿ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಖ್ಯಾತ ಮಾನವತಾವಾದಿ ಅಬ್ರಾಹಂ ಲಿಂಕನ್ ಅವರು ತಮ್ಮ ಪುತ್ರನಿಗೆ ಬರೆದ ಪತ್ರದ ಸರಣಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಸುಪ್ರೀಮ್ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್. ಎಸ್.ರಾಜೇಂದ್ರಬಾಬು, ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಣವನ್ನು ನಾವಿಂದು ಎತ್ತಿಹಿಡಿಯಬೇಕಿದೆ. ಇಂದಿನ ವಿಶ್ವ ವಿದ್ಯಾಲಯಗಳು ಪ್ರಮಾಣಪತ್ರಗಳನ್ನು ನೀಡುವ ಕಾರ್ಖಾನೆಗಳಾಗಿವೆ. ಈ ಸಂದರ್ಭದಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿಸುವ ಶಿಕ್ಷಣ ನೀಡಬೇಕಿದೆ ಎಂದರು.

ಆರ್ಥಿಕ ತಜ್ಞ, ಪ್ರಸಕ್ತ ವಿದ್ಯಮಾನಗಳ ವಿಶ್ಲೇಷಕರಾದ ಕೆ.ಸಿ.ರಘು ಮಾತನಾಡಿ, ಶಿಕ್ಷಕರ ಸಮಸ್ಯೆ ಎಂಬುದು ಸಮಾಜದ ಸಮಸ್ಯೆ. ಸಮಾಜದ ಸಮಸ್ಯೆಯು ದೇಶದ ಸಮಸ್ಯೆ. ಆದ್ದರಿಂದ ಸರಕಾರ ಕೂಡಲೇ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕು. ಸರಕಾರಗಳು ಆತ್ಮನಿರ್ಭರತೆ ಮತ್ತು ಆಚಾರ‍್ಯ ದೇವೋಭವ ಎನ್ನುತ್ತಲೇ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇನ್ನೊಂದೆಡೆ ತಾವು ಮಾಡುವ ಎಲ್ಲಾ ತಪ್ಪುಗಳಿಗೆ ದೇವರನ್ನು ಹೊಣೆಗಾರರನ್ನಾಗಿ ಮಾಡುವಂಥಹ ಕೆಟ್ಟ ಸನ್ನಿವೇಶದಲ್ಲಿದ್ದೇವೆ. ದೇವರನ್ನು ಇಷ್ಟು ದುರುಪಯೋಗ ಪಡೆಸಿಕೊಳ್ಳುವ ಸರಕಾರ ಈ ಹಿಂದೆ ಬಂದಿರಲಿಲ್ಲ. ಕೋವಿಡ್‌ನಂಥಹ ಸಂದರ್ಭದಲ್ಲಿ ಸರಕಾರ ಶಿಕ್ಷಕರ ಮತ್ತು ಈ ದೇಶದ ಜನತೆಯ ಬೆನ್ನಿಗಿರಬೇಕಿತ್ತು.

ಆದರೆ ಸರಕಾರವೇ ಸ್ವತಹ ತಮ್ಮ ಜವಾಬ್ದಾರಿಯನ್ನು ದೇವರ ಮೇಲೆ ಹಾಕಿ ಕೈ ತೊಳೆದುಕೊಳ್ಳುತ್ತಿವೆ. ಶಿಕ್ಷಕರು ಸಂಬಳ ಕೇಳದೆ ಇದ್ದಾಗ ಮಾತ್ರವೇ ದೇವೋಭವ ಎನ್ನುವ ಇವರನ್ನು ನಾವು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಬೇಕು. ಒಟ್ಟಿನಲ್ಲಿ ಸರಕಾರ ಶಿಕ್ಷಕ ಸಮುದಾಯಕ್ಕೆ ಒಟ್ಟಾಗಿ ಎದುರಿಸಿ ಇಲ್ಲವೇ ಪ್ರತ್ಯೇಕವಾಗಿ ನೇಣುಹಾಕಿಕೊಳ್ಳಿ ಎಂಬಂಥ ಸನ್ನಿವೇಶ ಸೃಷ್ಟಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಶಿಕ್ಷಕನ ಹೊಟ್ಟೆ ತುಂಬಿಸದೆ ಮಕ್ಕಳ ತಲೆಯನ್ನು ತುಂಬಿ ಎಂದು ಹೇಳುವ ಸರಕಾರದ ಈ ಕ್ರಮ ಅಮಾನವೀಯವಾದದ್ದು. ಹಿಂದಿನ ಸರಕಾರದಲ್ಲಿನ ತಪ್ಪುಗಳನ್ನು ತಿದ್ದುವ ಹಕ್ಕು ಪ್ರತಿ ಸರಕಾರಕ್ಕೂ ಇದೆ. ಆದರೆ ಕಾಲಗತಿಯಲ್ಲಿ ಸ್ಥಾಪಿತವಾದ ನೀತಿಗಳನ್ನು ಕಿತ್ತಿಹಾಕುವುದು ಸರಿಯಲ್ಲ. ಸರಕಾರದ ಖಾಸಗೀಕರಣ ನೀತಿಗಳನ್ನು ಕೈಬಿಟ್ಟು ರಾಷ್ಟ್ರೀಕರಣ ಮಾಡಲು ಮುಂದಾಗಬೇಕಿದೆ ಎಂದರು. ಸರಕಾರಗಳು ಈಗಿರುವ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಬೇಕು ಮತ್ತು ಇಡೀ ಶಿಕ್ಷಕ ಸಮುದಾಯದೊಂದಿಗೆ ನಿಲ್ಲಬೇಕು ಎಂದರು.

ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಸಮಿತಿಯ ಸೆಕ್ರೇಟರಿಯೇಟ್ ಸದಸ್ಯ ವೀರಭದ್ರಪ್ಪ ಆರ್.ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಐಶ್ವರ್ಯ ಸಿ.ಎಮ್ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಝೂಂ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಜನ ಅತಿಥಿ ಶಿಕ್ಷಕರು ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here