ಶಹಾಪುರ: ನಮ್ಮದೊಂದು ಅಸ್ತಿತ್ವ ಜಗತ್ತಿನ ಜೀವಿಗಳಲ್ಲಿ ಇರುವುದಾದರೆ ಅದು ಕಣ್ಣು ಮಾತ್ರ ಹೀಗಾಗಿ ಕಣ್ಣನ್ನು ಮಣ್ಣಾಗಲು ಬಿಡದೆ ಬೇರೊಬ್ಬರ ಜೀವನಕ್ಕೆ ಹೊನ್ನಾಗುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ನಂದಣ್ಣ ಪಾಟೀಲ್ ಹೇಳಿದರು.
ತಾಲ್ಲೂಕಿನ ವನದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 35 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಅಂಗವಾಗಿ ಆಯೋಜಿಸಿರುವ ನೇತ್ರದಾನ ಮಹಾದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ ಪ್ರಕಾರ 50 ಲಕ್ಷಕ್ಕೂ ಅಧಿಕ ಪುರುಷರು,ಮಹಿಳೆಯರು ಹಾಗೂ ಮಕ್ಕಳು ಅಂಧರಾಗಿ ಜೀವನ ನಡೆಸುತ್ತಿದ್ದಾರೆ ಇವರೆಲ್ಲರೂ ಯಾವತ್ತೂ ಸೂರ್ಯನ ಕಿರಣಗಳನ್ನು ಕಂಡಿಲ್ಲ,ಪೂರ್ಣ ಹುಣ್ಣಿಮೆ ಚಂದ್ರನ ಸವಿ ಸವಿದಿಲ್ಲ, ಇಂಥವರಿಗೆ ಸಹಾಯ ಮಾಡುವ ಮನಸ್ಸು ನಾವೆಲ್ಲರೂ ಮಾಡಬೇಕಾಗಿದೆ ಎಂದರು. ನೇತ್ರದಾನ ಮಾಡುವವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಈ ನಿಟ್ಟಿನಲ್ಲಿ ಸಮಾಜದ ಸಂಘ ಸಂಸ್ಥೆಗಳು ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಆರೋಗ್ಯ ಮೇಲ್ವಿಚಾರಕರಾದ ರಾಘವೇಂದ್ರ ಕುಲಕರ್ಣಿ ಮಾತನಾಡಿ ನೇತ್ರದಾನ ಎಂದರೆ ಕೆಲವರು ಇಡೀ ಕಣ್ಣನ್ನೇ ತೆಗೆಯುತ್ತಾರೆ ಎಂದು ತಿಳಿದಿರುತ್ತಾರೆ,ಆದರೆ ಅದು ತಪ್ಪು ಕಲ್ಪನೆ ಕಣ್ಣಿನ ಒಂದು ಪದರನ್ನು ಮಾತ್ರ ತೆಗೆಯಲಾಗುತ್ತದೆ,ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯತೆವಿದೆ ಕೆಲವರು ನೇತ್ರದಾನ ಮಾಡಿದ್ದರೂ ಕೂಡ ಮರಣ ಸಂಭವಿಸಿದಾಗ ಅವರ ಕುಟುಂಬದವರು ನಮಗೆ ಮಾಹಿತಿಯನ್ನು ನೀಡುವುದಿಲ್ಲ ಹಾಗೆಂದ ಮಾತ್ರಕ್ಕೆ ಅವರಿಗೆ ನೇತ್ರದಾನ ಇಷ್ಟವಿಲ್ಲ ಎಂದಲ್ಲ ಆದರೆ ಕಣ್ಣನ್ನು ಕಿತ್ತು ಬಿಟ್ಟರೆ ಅಂತಿಮ ಕ್ಷಣದಲ್ಲಿ ಅವರ ವಿರೂಪ ಮುಖವನ್ನು ನೋಡಲು ಸಾಧ್ಯವಿಲ್ಲ ಎಂಬ ಭಾವನಾತ್ಮಕ ಆಲೋಚನೆಯೂ ಅವರಲ್ಲಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕರಾದ ಮಲ್ಲೇಶ್ ಕುರಕುಂದಿ,ನೇತ್ರ ಸಹಾಯಕ ಬಸವರಾಜ್, ವಿಶ್ವರಾಧ್ಯ ಬೆಳ್ಳೂರು, ಷಣ್ಮುಖಪ್ಪ ಹೊಸಳ್ಳಿ,ದೇವಕ್ಕಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.