ಕಲಬುರಗಿ: ರಾಜ್ಯದಲ್ಲಿ ಡ್ರಗ್ಸ್ ವಿಚಾರ ತೀವ್ರ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿಯೇ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತಕ್ಷೇತ್ರದ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ ತಾಂಡಾದಲ್ಲಿ ಸುಮಾರು ೬.೦೦ ಕೋಟಿ ರೂಪಾಯಿ ಮೌಲ್ಯದ ೧೩೫೦ ಕೆ.ಜಿ. ಗಾಂಜಾ ಪತ್ತೆ ಯಾಗಿರುವುದು ಗಂಭೀರವಾದ ವಿಷಯವಾಗಿದ್ದು ಇಡೀ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಕೂಡಲೇ ಸಿ.ಬಿ.ಐ. ಗೆ ವಹಿಸುವಂತೆ ಜನಪರ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ರಾಜ್ಯದ ಇತಿಹಾಸದಲ್ಲಿಯೇ ಇಷ್ಟೊಂದು ಬೃಹತ್ ಪ್ರಮಾಣದ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ಕಲಬುರಗಿ ಜಿಲ್ಲೆಯ ಮತ್ತು ಕಾಳಗಿ ಪೊಲೀಸ ಠಾಣೆಯ ಪೊಲೀಸರ ಗಮನಕ್ಕೆ ಇದು ಬಂದಿರಲಿಲ್ಲವೇ? ಜಿಲ್ಲೆಯ ಗುಪ್ತಚರ ಇಲಾಖೆ ಏನು ಕೆಲಸ ಮಾಡುತ್ತಿದೆ ? ಎಂದು ಖಾರವಾಗಿ ಕೇಳಿರುವ ಅವರು ಬೆಂಗಳೂರಿನ ಪೊಲೀಸರು ಬಂದು ಗಾಂಜಾ ಪ್ರಕರಣ ಬಯಲಿಗೆಳೆಯುವ ತನಕ ಕಲಬುರಗಿ ಜಿಲ್ಲಾ ಪೊಲೀಸರು ಏನು ಮಾಡುತ್ತಿದ್ದರು.
ಇದು ಸಂಪೂರ್ಣ ಪೊಲೀಸ ಇಲಾಖೆ ವೈಫಲ್ಯವಾಗಿದ್ದು ಇಡೀ ಪ್ರಕರಣದ ಗಂಭೀರ ಸ್ವರೂಪದ್ದಾಗಿದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಸಿ.ಬಿ.ಐ. ತನಿಖೆಗೆ ಒಪ್ಪಿಸಿ ತಪ್ಪಿತಸ್ಥರ ಮೆಲೆ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದ್ದು ಜಿಲ್ಲೆಯ ಕೆಲ ಪೊಲೀಸ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಇದರ ಮಾಹಿತಿ ಇತ್ತು ಎನ್ನುವ ಗುಮಾನಿ ಇದ್ದು ತಮ್ಮ ಸ್ವಂತ ಲಾಭಕ್ಕಾಗಿ ಈ ಕಾನೂನು ಬಾಹಿರ ಮತ್ತು ಅಕ್ರಮ ಧಂದೆ ಮುಚ್ಚಿಟ್ಟಿರುವ ಸಾಧ್ಯತೆ ಇದೆ ಎನ್ನುವುದು ಜನತೆ ಆಡಿಕೊಳ್ಳುತ್ತಿದ್ದು ? ಕಾಳಗಿ ಪೊಲೀಸ ಠಾಣೆಯ ಮತ್ತು ಗುಪ್ತಚರ ಇಲಾಖೆಯ ಸಿಬ್ಬಂದಿಗಳನ್ನು ಮಂಪರು ಪರೀಕ್ಷೆಗೊಳಪಡಿಸಿ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡಿಸಿ ಭಾಗಿಯಾದವರ ನಿಜ ಬಣ್ಣ ಬಯಲು ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಸಪ್ಟೆಂಬರ್ ೧೭ ರಂದು ಕಲಬುರಗಿ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಲಾಗುವುದು.