ಕಲಬುರಗಿ: ಕವಿ, ಲೇಖಕರು ಸಮಾಕಾಲೀನ ವಿದ್ಯಮಾನಗಳಿಗೆ ಸ್ಪಂದಿಸಬೇಕು ಎಂದು ಹುಮನಾಬಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಏಕದಂಡಗಿ ಮಠದ ಅಜೇಂದ್ರ ಸ್ವಾಮಿ ಹೇಳಿದರು.
ಕಾವ್ಯ ಬರೆದ ಕವಿಗೆ ಯಶಸ್ಸು, ಸಂಪಾದನೆ ತಂದುಕೊಡಬೇಕು, ಓದಿದವರನ್ನು, ಬರೆದವರನ್ನು ರಕ್ಷಿಸುವಂತಿರಬೇಕು ಎಂದು ತಿಳಿಸಿದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸೇಡಂ ಸಾಂಸ್ಕೃತಿಕ ಪ್ರತಿಷ್ಠಾನ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂಡಳದಲ್ಲಿ ಭಾನುವಾರ ನಡೆದ ಹಿರಿಯ ಕವಿ ನರಸಿಂಗರಾವ ಹೇಮನೂರ ಅವರ “ನೆನಪು ನೂರು ನೂರು ತರಹ” ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಒಂದು ಭಾವ ಮುಖ್ಯವಾಗಿದ್ದು, ಇಷ್ಟಪಟ್ಟು ಬರೆಯುವುದಕ್ಕಿಂತ ಇಷ್ಟಪಟ್ಟು ಬರೆಯಬೇಕು ಎಂದು ವಿವರಿಸಿದರು.
ಪುಸ್ತಕ ಕುರಿತು ಭೀಮರಾಯ ಹೇಮನೂರ ಮಾತನಾಡಿ, ನರಸಿಂಗರಾವ ಹೇಮನೂರ ಅವರ ಈ ಕಾವ್ಯದಲ್ಲಿ ಜೀವನದ ಸೊಗಸಿದೆ. ಪ್ರಾದೇಶಿಕ ಭಾಷೆಯ ಸೊಗಡಿದೆ. ಕಿರಿದರಲ್ಲಿ ಹಿರಿದನ್ನು ಕಟ್ಟಿಕೊಡುವ ತಾಕತ್ತಿದೆ ಎಂದು ಬಣ್ಣಿಸಿದರು.
ಹಿರಿಯ ಸಾಹಿತಿ ಪ. ಮಾನು ಸಗರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮುಖ್ಯ ಅತಿಥಿಯಾಗಿದ್ದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ, ಸಂಸ್ಕೃತಿ ಪ್ರಕಾಶನದ ಪ್ರಭಾಕರ ಜೋಶಿ ವೇದಿಕೆಯಲ್ಲಿದ್ದರು. ಡಾ. ಮಲ್ಲಿನಾಥ ತಳವಾರ ನಿರೂಪಿಸಿದರು.
ಮಹಿಪಾಲರೆಡ್ಡಿ ಮುನ್ನೂರ್, ದೇವೇಗೌಡ ತೆಲ್ಲೂರ, ಎಚ್.ಎಸ್. ಬೇನಾಳ, ಡಾ. ಗಾಂಧೀಜಿ ಮೋಳಕೇರಿ, ವೆಂಕಟೇಶ ನೀರಡಗಿ, ಕಿರಣ ಪಾಟೀಲ, ವೆಂಕಟೇಶ ಜನಾದ್ರಿ, ಕೆ.ಎಸ್. ಬಂಧು, ಡಾ. ಕಟ್ಟಿ, ಶಿವರಂಜನ್ ಸತ್ಯಂಪೇಟೆ ಇತರರು ಇದ್ದರು.
ಕೋವಿಡ್ ನಿಯಮದ ಪ್ರಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಮಾಸ್ಕ್ ವಿತರಿಸಲಾಯಿತು. ಸಹೃದಯರ ಕೈಗೆ ಸಾನಿಟೈಸರ್ ಕೂಡ ಸಿಂಪಡಿಸಲಾಯಿತು.