ಶಹಾಬಾದ:ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕಾತಿ ಆದೇಶ ಪ್ರತಿ ನೀಡುವಂತೆ ಒತ್ತಾಯಿಸಿ ಸೋಮವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಶಿಶು ಅಭಿವೃದ್ಧಿ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಕಳೆದ ವರ್ಷ ಶಿಶು ಅಭಿವೃದ್ಧಿ ಇಲಾಖೆ ಶಹಾಬಾದನಲ್ಲಿ ಖಾಲಿ ಇರುವ ಐದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಹದಿನೈದು ಜನ ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ತದ ನಂತರ ತಾತ್ಕಾಲಿಕ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.
ಆದರೆ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಮಧ್ಯವರ್ತಿಗಳಿಂದ ಮುಖಾಂತರ ಹಣ ಪಡೆದು ವಿನಾ ಕಾರಣ ಆಕ್ಷೇಪಣೆ ಸಲ್ಲಿಸಲು ಆಯ್ಕೆಯಾದ ಅಭ್ಯರ್ಥಿಗಳಿಗೆ ಹೇಳಿರುತ್ತಾರೆ. ಕೆಲವು ಜನರಿಂದ ಆಕ್ಷೇಪಣೆ ಬಂದಿದೆ ಎಂದು ನೆಪವೊಡ್ಡಿ ನಿಜವಾದ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ನೀಡಲು ಸುಮಾರು ಒಂದು ವರ್ಷದಿಂದ ಕೊಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ.ಆದ್ದರಿಂದ ಕೂಡಲೇ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ದಸಂಸ ಶಹಾಬಾದ ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ, ಚಿತ್ತಾಪೂರ ಸಂಚಾಲಕ ರವಿ ಬಡಿಗೇರ, ಶಿವು ಜಡಿಯಾರ,ಹಣಮಂತ ಹೇರೂರ,ಮಹಾದೇವ ನಾಟೇಕಾರ, ಶರಣು ಧನ್ನೇಕರ್,ವಿಜಯ ಯಲಸತ್ತಿ, ಸಾಯಿನಾಥ ತೋಳೆ, ಶಿವು ತುನ್ನೂರ್, ಮಂಜುನಾಥ ನಾಲವಾರ ಇತರರು ಇದ್ದರು.